ಜಿಲ್ಲಾಸುದ್ದಿ

ಅಕ್ಟೋಬರ್ ಕೊನೆಯ ವಾರದಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರಗಿ, ಅ. 6: ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಮ್ಮೇಳನವು ಕೇವಲ ಸಾಹಿತಿಗಳ ಸಮಾವೇಶವಲ್ಲ. ಜಿಲ್ಲೆಯ ಸಾವಿರಾರು ಕನ್ನಡಿಗರು ಭಾಗವಹಿಸುವ ಸಾಂಸ್ಕೃತಿಕ ಉತ್ಸವವಾಗಬೇಕು. ಕನ್ನಡ ಭಾಷೆಯ ಉಳಿವಿಗಾಗಿ ನಡೆಯುವ ಈ ಸಮ್ಮೇಳನ ನಮ್ಮ ಸಂಸ್ಕೃತಿಯ ಪ್ರತೀಕವಾಗಲಿದೆ’ ಎಂದರು.

ನಾಡು–ನುಡಿ, ನೆಲ–ಜಲದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಮೂಲಕ ಯುವಜನರಲ್ಲಿ ದೇಶಪ್ರೇಮ ಹಾಗೂ ಭಾಷಾಭಿಮಾನ ಬೆಳೆಸುವ ಜೊತೆಗೆ, ಹೊಸ ಪೀಳಿಗೆಯು ಕನ್ನಡದ ಕಹಳೆಯನ್ನು ಜಿಲ್ಲೆಯಾದ್ಯಂತ ಮೊಳಗಿಸುವಂತೆ ಮಾಡುವ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.

ಸಮ್ಮೇಳನದ ಅಧ್ಯಕ್ಷರ ಆಯ್ಕೆ ಹಾಗೂ ಸ್ವಾಗತ ಸಮಿತಿ ರಚನೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ, ಮುಂದಿನ ವಾರದಿಂದಲೇ ಸಿದ್ಧತಾ ಕಾರ್ಯಗಳನ್ನು ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈಗಾಗಲೇ ಐದು ಜಿಲ್ಲಾ ಸಮ್ಮೇಳನಗಳು, 15 ವಿಶೇಷ ಸಮ್ಮೇಳನಗಳು ಹಾಗೂ ನೂರಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ ಕೀರ್ತಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಹಾಗೂ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿದರು. ಆಡಂಬರವಿಲ್ಲದೆ ಅರ್ಥಪೂರ್ಣ ಚರ್ಚೆಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ವಿನಿಮಯಕ್ಕೆ ಆದ್ಯತೆ ನೀಡುವ ಮೂಲಕ ಸಮ್ಮೇಳನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಮುಖರಾದ ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ಡಾ. ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ಶಿವಾನಂದ ಸುರವಸೆ, ಶಿವಾನಂದ ಪೂಜಾರಿ, ಧರ್ಮರಾಜ ಜವಳಿ, ಜೆ.ಎಸ್. ವಿನೋದಕುಮಾರ, ಸಿದ್ಧಲಿಂಗ ಬಾಳಿ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ಹಣಮಂತರಾವ್ ಪೇಂಚನಪಳ್ಳಿ, ಸೈಯ್ಯದ್ ನಜರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button