ಜಿಲ್ಲಾಸುದ್ದಿ

ಪೊಲೀಸ್ ಇಲಾಖೆ ಮತ್ತು ವೈದ್ಯಕೀಯ ಕ್ಷೇತ್ರ ಒಂದೇ ನಾಣ್ಯದ ಎರಡು ಮುಖಗಳು: ಎಸ್‌ಪಿ ಪ್ರದೀಪ್ ಗುಂಟಿ

ಬೀದರ್, ಅ.3: ಸಮಾಜದ ಸುರಕ್ಷತೆ ಹಾಗೂ ಜನರ ಆರೋಗ್ಯ ಸಾರ್ವಜನಿಕ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಹಾಗೂ ಜೀವ ಉಳಿಸುವ ವೈದ್ಯಕೀಯ ಕ್ಷೇತ್ರ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಆರೋಗ್ಯ ಮತ್ತು ಸುರಕ್ಷತೆಯನ್ನು ಬಲಪಡಿಸುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.

ನಗರದ ಗುಡೆಗೆ ಆಸ್ಪತ್ರೆಯ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆ ಹಾಗೂ ಹೃದಯದ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಸ್ತೆ ಅಪಘಾತಗಳು, ಹಲ್ಲೆ ಪ್ರಕರಣಗಳು ಹಾಗೂ ವಿವಿಧ ತುರ್ತು ಸಂದರ್ಭಗಳಲ್ಲಿ ಪೊಲೀಸರು ಮತ್ತು ವೈದ್ಯರು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಪೊಲೀಸರು ಅಪಘಾತ ಅಥವಾ ಘಟನೆ ನಡೆದ ಸ್ಥಳಕ್ಕೆ ತ್ವರಿತವಾಗಿ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಾರೆ. ವೈದ್ಯರು ಕೂಡಲೇ ಚಿಕಿತ್ಸೆ ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಾರೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿಯೂ ವೈದ್ಯಕೀಯ ವರದಿಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಎರಡೂ ಕ್ಷೇತ್ರಗಳ ನಡುವೆ ಉತ್ತಮ ಸಮನ್ವಯ ಹಾಗೂ ಪರಸ್ಪರ ಸಹಕಾರ ಅಗತ್ಯ ಎಂದು ತಿಳಿಸಿದರು.

ಯುವ ಹೃದ್ರೋಗ ತಜ್ಞ ಡಾ. ನಿತಿನ್ ಗುಡೆಗೆ ಮಾತನಾಡಿ, ಇಂದಿನ ಜೀವನಶೈಲಿ, ಮಾನಸಿಕ ಒತ್ತಡ, ಅಸಮತೋಲಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಧೂಮಪಾನದಂತಹ ದುಶ್ಚಟಗಳು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಯುವಜನರು ಸೇರಿದಂತೆ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು, ತಲೆಸುತ್ತು ಹಾಗೂ ಅಸಹಜ ಹೃದಯಬಡಿತದಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ದೈಹಿಕ ವ್ಯಾಯಾಮ ಹಾಗೂ ಮಾನಸಿಕ ಒತ್ತಡದ ನಿಯಂತ್ರಣದ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಹೃದಯ ತಜ್ಞ ಹಾಗೂ ಗುಡೆಗೆ ಆಸ್ಪತ್ರೆಯ ಅಧ್ಯಕ್ಷ ಡಾ. ಚಂದ್ರಕಾಂತ ಗುಡೆಗೆ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಶಿಸ್ತು ಮತ್ತು ಸೇವಾ ಮನೋಭಾವ ಅಗತ್ಯ. ವೈದ್ಯಕೀಯ ಶಿಕ್ಷಣವು ದೀರ್ಘಕಾಲದ ಅಧ್ಯಯನ ಹಾಗೂ ತರಬೇತಿಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಆರಂಭದಿಂದಲೇ ಸ್ಪಷ್ಟ ಗುರಿ ಹೊಂದಿ ಶ್ರಮಿಸಬೇಕು. ವೈದ್ಯರಾಗುವುದು ಕೇವಲ ಉದ್ಯೋಗವಲ್ಲ; ಜನರ ಜೀವ ಮತ್ತು ಆರೋಗ್ಯದ ಜವಾಬ್ದಾರಿ ಹೊರುವ ಮಹತ್ವದ ಸೇವೆಯಾಗಿದೆ ಎಂಬ ಅರಿವು ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗೂ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸಚಿನ್ ಗುಡೆಗೆ, ಡಾ. ಪ್ರಶಾಂತ ಅಲ್ಲೆ, ಡಾ. ಸುಕಾನಂದ, ಡಾ. ವಿಶ್ವನಾಥ ಪಾಟೀಲ, ಡಾ. ಆನಂದರಾವ್, ಡಾ. ಮಹೇಶ ತೊಂಡಾರೆ ಹಾಗೂ ಗುಡೆಗೆ ಆಸ್ಪತ್ರೆಯ ಎ.ಕೆ. ಮಿಶ್ರಾ ಉಪಸ್ಥಿತರಿದ್ದರು.

ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಗುಡೆಗೆ ಆಸ್ಪತ್ರೆಯ ವತಿಯಿಂದ ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಿರುಚಿತ್ರಗಳನ್ನು ರೂಪಿಸುವವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button