ಜಿಲ್ಲಾಸುದ್ದಿ

ತತ್ವಪದಕಾರರ ಪ್ರಾಧಿಕಾರ ರಚನೆಯಾಗಲಿ: ಪ್ರಕಾಶ ಅಂಗಡಿ

ಜೇವರ್ಗಿ, ಅ.3- ಕರ್ನಾಟಕ ಸರ್ಕಾರ ಈಗಾಗಲೇ ಹಲವು ಅಕಾಡೆಮಿ ಹಾಗೂ ಪ್ರಾಧಿಕಾರಗಳ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಂತೆ, ತತ್ವಪದಕಾರರ ಪ್ರಾಧಿಕಾರವನ್ನೂ ರಚಿಸುವ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಮುಂಡೇವಾಲ ಅವರ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕಿನ ತತ್ವಪದಕಾರರ ಕುರಿತು ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಾಲ್ಲೂಕಿನ ತತ್ವಪದಕಾರರ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ನಾಡಿನ ತತ್ವಪದ ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಅನನ್ಯವಾಗಿದೆ. ಕಡಕೋಳದ ಮಡಿವಾಳಪ್ಪ, ಚನ್ನೂರಿನ ಜಾಲಾಲಸಾಬ್, ಕೈನೂರಿನ ಕೃಷ್ಣಪ್ಪ, ಕಡ್ಲೇವಾಡದ ಸಿದ್ಧಪ್ಪ, ರಾಮಪುರದ ಬಕ್ಕಪ್ಪಯ್ಯ ಸೇರಿದಂತೆ ಅನೇಕ ಸಮಕಾಲೀನ ತತ್ವಪದಕಾರರು ಈ ನೆಲದಲ್ಲಿ ತತ್ವಪದಗಳ ಮೂಲಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸಿದ್ದಾರೆ. ಇಂತಹ ಎಲ್ಲ ತತ್ವಪದಗಳನ್ನು ಸರ್ಕಾರದಿಂದ ದಾಖಲಿಸಿ ಸಂರಕ್ಷಿಸಬೇಕು ಎಂದು ಅವರು ಹೇಳಿದರು.

ತಾಲ್ಲೂಕಿನ ತತ್ವಪದಕಾರರ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಆರಂಭಿಸಬೇಕು. ಕರ್ನಾಟಕ ಜಾನಪದ ಅಕಾಡೆಮಿಯಲ್ಲಿ ಕಡಕೋಳ ಮಡಿವಾಳಪ್ಪ ಅವರ ಹೆಸರಿನಲ್ಲಿ ಸರ್ಕಾರದ ದತ್ತಿ ಪ್ರಶಸ್ತಿ ಆರಂಭಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇರುವ ಟ್ರಸ್ಟ್‌ಗಳ ಮಾದರಿಯಲ್ಲಿ ಕಡಕೋಳ ಮಡಿವಾಳಪ್ಪ ಅವರ ಹೆಸರಿನಲ್ಲಿ ಸರ್ಕಾರದಿಂದ ಟ್ರಸ್ಟ್ ಆರಂಭಿಸಬೇಕು ಎಂದು ಪ್ರಕಾಶ ಅಂಗಡಿ ಒತ್ತಾಯಿಸಿದರು.

ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಉದ್ಘಾಟಿಸಿ ಮಾತನಾಡಿ, ತತ್ವಪದಕಾರರ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು. ಈ ಕ್ಷೇತ್ರದಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ತಾಲ್ಲೂಕಿನ ತತ್ವಪದಕಾರರ ಕುರಿತು ವಿಶೇಷ ಸಂಶೋಧನೆ ಕೈಗೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ಜಾನಪದ ತತ್ವಪದ ಸಾಹಿತ್ಯವು ನಮ್ಮ ತಲೆಮಾರುಗಳ ಅಮೂಲ್ಯ ಆಸ್ತಿಯಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ವಿಷಯಗಳಿಗೆ ಮಾತ್ರ ಸೀಮಿತವಾಗದೆ, ಪಠ್ಯೇತರ ಸಾಹಿತ್ಯ ಮತ್ತು ಐತಿಹಾಸಿಕ ವಿಷಯಗಳ ಬಗ್ಗೆಯೂ ಹೆಚ್ಚಿನ ಅಧ್ಯಯನ ಮಾಡಬೇಕು ಎಂದರು.

ಸರ್ಕಾರವೂ ತತ್ವಪದಕಾರರು ಹಾಗೂ ಜಾನಪದ ಕಲಾವಿದರನ್ನು ಗುರುತಿಸಿ ವಿಶೇಷವಾಗಿ ಗೌರವಿಸಬೇಕು. ತಾಲ್ಲೂಕಿನ ಸಮಗ್ರ ತತ್ವಪದ ಪರಂಪರೆಯನ್ನು ಒಳಗೊಂಡ ಸಂಪುಟಗಳನ್ನು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.

ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಾ ಬಿ. ಅಷ್ಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶೀನಾಥ್ ಮುಂಡೇವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಘಾಟನಾ ಸಮಾರಂಭದ ನಂತರ ನಡೆದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ತತ್ವಪದಕಾರರ ಕುರಿತು ಸಾಹಿತಿ ಡಾ. ಧರ್ಮಣ್ಣ ಬಡಿಗೇರ್ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಡಾ. ಗೋವಿಂದರಾಜ ಆಳದಾಳ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ ಸಮಾರೋಪ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಖಾಜಾವಲಿ ಈಚನಾಳ್ ಹಾಗೂ ಭೀಮಣ್ಣ ಬೇಡಕಪಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆಕಾಶವಾಣಿ ಕಲಾವಿದರಾದ ಮನೋಹರ ವಿಶ್ವಕರ್ಮ ಸಾಗರ ಹಾಗೂ ಬಸವರಾಜ ಜಾಯಿ ತಂಡದವರು ಕಡಕೋಳ ಮಡಿವಾಳಪ್ಪ ಅವರ ತತ್ವಪದಗಳನ್ನು ಸುಮಧುರವಾಗಿ ಹಾಡಿದರು.

ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸುಮಾರು 300 ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಡಾ. ಖಾಜಾವಲಿ ಈಚನಾಳ್ ನಿರೂಪಿಸಿ ವಂದಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button