“ಹಿಂದೂ ಅಲ್ಲ ಎಂದರೆ ಅಪ್ಪನಿಗೆ ಹುಟ್ಟಿಲ್ಲ ಎನ್ನುವಂತಲ್ಲ”: ಬೀದರ್ ಶಿವಕುಮಾರ ಸ್ವಾಮೀಜಿ ಹೇಳಿಕೆಗೆ ಖಂಡನೆ

ಕಲಬುರಗಿ, ಅ.1– ನಗರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಬೀದರ್ನ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಅವರು ಮಾಡಿದ ಹೇಳಿಕೆಗಳನ್ನು ಖಂಡನೀಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದೂ ಆಗಿ ಹುಟ್ಟಿದವನು, ನಾನು ಹಿಂದೂ ಅಲ್ಲ ಎಂದರೆ ಅಪ್ಪನಿಗೆ ಹುಟ್ಟಿದವನಲ್ಲ” ಎಂಬ ರೀತಿಯ ಹೇಳಿಕೆಗಳನ್ನು ನೀಡುವುದು ಖಂಡನೀಯ. ಸ್ವಾಮೀಜಿಗಳು ತಮ್ಮ ಮಾತುಗಳ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಆಗ್ರಹಿಸಿದರು.
ದೇಶದ ಮೂಲನಿವಾಸಿಗಳಾದ ಅಸ್ಪೃಶ್ಯರು ಮತ್ತು ಆದಿವಾಸಿಗಳು ಹಿಂದೂ ಧರ್ಮವನ್ನು ಏಕೆ ಧಿಕ್ಕರಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜಾತಿ, ಲಿಂಗ ತಾರತಮ್ಯ ಸೇರಿದಂತೆ ಸಾಮಾಜಿಕ ಅಸಮಾನತೆಗಳಿಗೆ ಕಾರಣವಾದ ವ್ಯವಸ್ಥೆಯ ವಿರುದ್ಧ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೋರಾಡಿದ್ದರು. 1935ರ ಯೇವಲಾ ಸಮಾವೇಶದಲ್ಲಿ “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ” ಎಂದು ಅಂಬೇಡ್ಕರ್ ಹೇಳಿದ್ದನ್ನು ಅವರು ಉಲ್ಲೇಖಿಸಿದರು.
1956ರ ಅಕ್ಟೋಬರ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು. ಅಸ್ಪೃಶ್ಯತೆಯಿಂದ ನೊಂದಿದ್ದ ಅನೇಕರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿರುವುದನ್ನು ಸ್ವಾಮೀಜಿಗಳು ಅರ್ಥಮಾಡಿಕೊಳ್ಳಬೇಕು ಎಂದು ಭದ್ರೆ ಹೇಳಿದರು.
ಅಶೋಕನ ಕಾಲದಲ್ಲಿ ನಿರ್ಮಾಣವಾದ ಬೌದ್ಧ ವಿಹಾರಗಳ ಕುರಿತು ಚರ್ಚೆ ನಡೆಸಬೇಕು. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬೌದ್ಧ ವಿಹಾರಗಳು ಹೆಚ್ಚಾಗಿರುವುದಕ್ಕೆ ಕಾರಣವೇನು ಎಂಬುದನ್ನು ಸಂಬಂಧಿಸಿದವರು ವಿವರಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಕುರಿತು ಕನೇರಿ ಸ್ವಾಮೀಜಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಸವಣ್ಣನವರ ವಿಚಾರಧಾರೆ, ಸಮಾನತೆಯ ಆಶಯ ಹಾಗೂ ವೈಚಾರಿಕ ನಿಲುವುಗಳಿಗೆ ವಿರುದ್ಧವಾಗಿ ಸಮಾಜವನ್ನು ಕೊಂಡೊಯ್ಯುವ ಪ್ರಯತ್ನ ನಡೆಯಬಾರದು. ಬಸವಣ್ಣನವರು ಅಕ್ಷರ ಮತ್ತು ವಿಚಾರದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದವರು. ಶರಣರ ವಚನಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಸಮುದಾಯಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಿದೆ ಎಂದು ಹೇಳಿದರು.
ಹಿಂದೂತ್ವದ ಹೆಸರಿನಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿಂದ ವಂಚಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಹಿಂದೂತ್ವದ ಕುರಿತು ಮಾತನಾಡುವ ಮಠಾಧೀಶರು ತಮ್ಮ ಮಾತುಗಳಲ್ಲಿ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಜನರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ಮಹೇಶ ಕೋಕಿಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



