ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ತ್ವರಿತವಾಗಿ ಐಟಿ ಪಾರ್ಕ್ ಸ್ಥಾಪನೆಗೆ ಆಗ್ರಹ

ಕಲಬುರಗಿ, ಅ.1: ರಾಜ್ಯ ಸರ್ಕಾರದ ಘೋಷಣೆಯಂತೆ ಕಲಬುರಗಿ ನಗರದಲ್ಲಿ ತ್ವರಿತವಾಗಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ನಾಡು ಅಭಿವೃದ್ಧಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತಣ್ಣ ಎಸ್. ನಡಗೇರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಪಾರ್ಕ್‌ನಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಜಾಗತಿಕ ಸಾಮರ್ಥ್ಯ ಕೇಂದ್ರ, ಕೇಂದ್ರ ಸರ್ಕಾರದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕೇಂದ್ರ ಹಾಗೂ ಉದ್ದೇಶಿತ ವಿಜ್ಞಾನ ನಗರ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಒಂದೇ ಸೂರಿನಡಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಸೇರಿದಂತೆ ಪ್ರಮುಖ ಕಂಪನಿಗಳ ಶಾಖೆಗಳನ್ನು ಕಲಬುರಗಿಯಲ್ಲಿ ತೆರೆಯಲು ಆಹ್ವಾನ ನೀಡಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಹಾಗೂ ನವೋದ್ಯಮ ಹೂಡಿಕೆದಾರರ ಸಮಾವೇಶ ಆಯೋಜಿಸಿ, ಐಟಿ ಪಾರ್ಕ್‌ಗೆ ಶೀಘ್ರ ಜಾಗ ಗುರುತಿಸಿ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳಿಗಾಗಿ ಕ್ರೀಡಾ ನಗರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಪಿಎಂ ಮಿತ್ರ ಜವಳಿ ಪಾರ್ಕ್‌ಗೆ ರಾಜ್ಯ ಸರ್ಕಾರದ ವತಿಯಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ಜವಳಿ ಪಾರ್ಕ್ ಆರಂಭಿಸಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಾಗೂ ಸಂವಿಧಾನದ 371(ಜೆ) ಕಲಂನ ಸಮರ್ಪಕ ಅನುಷ್ಠಾನಕ್ಕಾಗಿ ಘೋಷಿಸಲಾಗಿರುವ ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಚಿವಾಲಯವನ್ನು ಕಲಬುರಗಿಯಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ ಘೋಷಿಸಲಾಗಿರುವ ₹1,685 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬೀದರ್–ಕಲಬುರಗಿ–ಲಿಂಗಸುಗೂರು–ಬಳ್ಳಾರಿ ನಡುವೆ ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಹೈಕೋರ್ಟ್ ಆದೇಶದಂತೆ ಜಿಲ್ಲಾಡಳಿತವು ಕಲಬುರಗಿ ಕೋಟೆಯೊಳಗಿನ ಒತ್ತುವರಿದಾರರನ್ನು ತೆರವುಗೊಳಿಸಿ, ಕೋಟೆಯನ್ನು ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಳಖೇಡ ಕೋಟೆ, ನಾಗಾವಿ ವಿಶ್ವವಿದ್ಯಾಲಯದ ಸ್ಮಾರಕಗಳು ಹಾಗೂ ಸನ್ನತಿ ಸ್ಮಾರಕಗಳನ್ನು ಒಳಗೊಂಡಂತೆ ರಾಷ್ಟ್ರೀಯ ಪ್ರವಾಸಿ ವಲಯ ರೂಪಿಸಿ, ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಗಾಣಗಾಪುರ, ಘಟ್ಟರ್ಗಿ ಹಾಗೂ ಕಲಬುರಗಿ ನಗರದ ಪ್ರಮುಖ ದೇವಾಲಯಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ತೊಗರಿ ಮಂಡಳಿಯನ್ನು ಕೇಂದ್ರದ ಮಾದರಿಯಲ್ಲಿ ಬಲಪಡಿಸಿ, ತೊಗರಿ ಸಂಶೋಧನಾ ಸಂಸ್ಥೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯ ಆರು ಅಣೆಕಟ್ಟುಗಳ ಕಾಲುವೆಗಳ ದುರಸ್ತಿ ಕೈಗೊಂಡು ರೈತರ ಹೊಲಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಸಣ್ಣ ನೀರಾವರಿ ಸಚಿವ ಅಜಯ್ ಸಿಂಗ್ ಅವರು ಪ್ರತಿ ತಾಲ್ಲೂಕಿನಲ್ಲಿ 100 ಕೆರೆಗಳನ್ನು ನಿರ್ಮಿಸುವ ಯೋಜನೆ ರೂಪಿಸಬೇಕು ಎಂದು ನಡಗೇರಿ ಒತ್ತಾಯಿಸಿದರು.

ಕಲಬುರಗಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು. ವಿಭಾಗ ಮಟ್ಟದ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಬೇಕು. ವಿಧಾನಸಭೆ ಅಧಿವೇಶನ ಹಾಗೂ ಸಚಿವ ಸಂಪುಟ ಸಭೆಗಳನ್ನು ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಮತ್ತು ಬೆಳಗಾವಿಯ ಸುವರ್ಣಸೌಧ ಮಾದರಿಯಲ್ಲಿ ಕಲಬುರಗಿಯಲ್ಲಿ ನಡೆಸಲು ಕಲ್ಯಾಣ ಸೌಧ ನಿರ್ಮಿಸಬೇಕು ಎಂದು ಹೇಳಿದರು.

ನಗರದ ಎರಡನೇ ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ಅಭಿವೃದ್ಧಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ, ಘೋಷಿಸಿದ ಯೋಜನೆಗಳನ್ನು ಜಾರಿಗೊಳಿಸದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯವನ್ನು ಜನತಾ ನ್ಯಾಯಾಲಯದ ಮುಂದೆ ಇರಿಸಲಾಗುವುದು ಎಂದು ನಡಗೇರಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಬು ಮದನಕರ್, ಸಂಘಟಕರಾದ ಜೈಭೀಮ ಮಾಳಗೆ, ಅರುಣ ತಾವಡೆ, ಮೋಹನ ಸಾಗರ, ರಾಹುಲ್ ಶೃಂಗೇರಿ ಹಾಗೂ ಮಲ್ಲು ದೊರೆ ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button