ಜಿಲ್ಲಾಸುದ್ದಿ

ಅ.4ರಂದು ಕಲಬುರಗಿಯಲ್ಲಿ ‘ಈವ ನಮ್ಮವ ಬಸವ ಸಂಸ್ಕೃತಿ ಉತ್ಸವ’

ಕಲಬುರಗಿ, ಅ.1– ನಗರದ ಜಯನಗರದ ಅನುಭವ ಮಂಟಪದಲ್ಲಿ ಅ.4ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಲಿಂಗೈಕ್ಯ ಪೂಜ್ಯ ತಂದೆ–ತಾಯಿಯವರ ಸ್ಮರಣಾರ್ಥ ‘ಈವ ನಮ್ಮವ ಬಸವ ಸಂಸ್ಕೃತಿ ಉತ್ಸವ–ಕಲಬುರಗಿ–2026’ ಆಯೋಜಿಸಲಾಗಿದೆ ಎಂದು ಲಿಂಗಾಯತ ಅಧ್ಯಯನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಶ್ರೀಶೈಲ ಮಸೂತೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ‘ಈವ ನಮ್ಮವ’ ಪುಸ್ತಕ ಬಿಡುಗಡೆ, ದೇವದಾಸಿ ವಿದ್ಯಾರ್ಥಿನಿಯರ ಶಿಕ್ಷಣದ ದತ್ತು ಸ್ವೀಕಾರ, ದೇವದಾಸಿ ಮಕ್ಕಳ ಕಲ್ಯಾಣ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಕಾಯಕ ಸಮುದಾಯದ ಮಠಾಧೀಶರಿಗೆ ಗೌರವ ಪುರಸ್ಕಾರ ನೀಡಲಾಗುವುದು. ಸಮಾನತೆಯ ತತ್ವದ ಆಧಾರದಲ್ಲಿ ಒಂದಾದ ಶರಣ ದಂಪತಿಗೂ ಗೌರವ ಸಲ್ಲಿಸಲಾಗುವುದು ಎಂದು ಹೇಳಿದರು.

ಬಸವಕಲ್ಯಾಣದ ಶರಣೆ ದಾನಮ್ಮ ಬಳಗ ಹಾಗೂ ಶರಣೆ ಅಕ್ಕನಾಗಲಾಂಬಿಕೆ ಗಣದಿಂದ ಗುರು ಬಸವ ಸ್ತುತಿ ನಡೆಯಲಿದೆ. ಇಳಕಲ್‌ನ ಗುರುಮಹಾಂತ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಗುಳೆದಗುಡ್ಡದ ಗುರು ಬಸವರಾಜ ಪದ್ದಯ್ಯ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಿದ್ಧರಾಮ ಬೆಲ್ದಾಳ ಶರಣರು ಅಧ್ಯಕ್ಷತೆ ವಹಿಸಲಿದ್ದು, ಕುಂಬಳಗೋಡಿನ ಜಗದ್ಗುರು ಚೆನ್ನಬಸವಾನಂದ ಸ್ವಾಮೀಜಿ, ಚಿಗರಹಳ್ಳಿಯ ಸಿದ್ಧಬಸವ ಕಬೀರ ಸ್ವಾಮೀಜಿ, ಆಳಂದದ ಕೊರಣೆಶ್ವರ ಸ್ವಾಮೀಜಿ, ಸದ್ಗುರು ಮಾತೆ ಸತ್ಯದೇವಿ, ಮಾತೆ ಮಹಾನಂದ ತಾಯಿ ಹಾಗೂ ಪ್ರಭುಶ್ರೀ ಮಾತಾಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಉದ್ಘಾಟನೆ ನೆರವೇರಿಸಲಿದ್ದಾರೆ. ಚಿಂತಕ ಡಾ. ರಂಜಾನ್ ದರ್ಗಾ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಸದ್ಗುರು ಬಸವಪ್ರಭು ಮಹಾಸ್ವಾಮೀಜಿಯವರಿಗೆ ‘ಧರ್ಮಕ್ರಾಂತಿ ಧೀರಯೋಗಿ ಪ್ರವಚನ ಪಿತಾಮಹ’, ಪದ್ಮಶ್ರೀ ಪುರಸ್ಕೃತ ಶರಣೆ ಡಾ. ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ‘ಲಿಂಗಾನಂದಶ್ರೀ’ ಪ್ರಶಸ್ತಿ ಹಾಗೂ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಚಿನ್ಮಯಾದ್ರಿ ಚಿತ್ತಳ ಅವರಿಗೆ ‘ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ನಾಗಲಕ್ಷ್ಮಿ ಚೌಧರಿ, ಶಿವರುದ್ರಪ್ಪ ಎನ್.ಬಿ., ಕೆ. ನೀಲಾ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆರ್.ಕೆ. ಹುಡಗಿ, ಎಸ್. ದಿವಾಕರ್, ಡಾ. ಮೀನಾಕ್ಷಿ ಬಾಳಿ, ವಿಶ್ವರಾಜ್ಯ ಸತ್ಯಂಪೇಟೆ, ಜೆ.ಎಸ್. ಪಾಟೀಲ, ಡಾ. ದಯಾನಂದ ನೂಲಿ, ಸಂಜಯ್ ಮಾಕಲ್ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದರು.

ವಿಶೇಷ ಆಹ್ವಾನಿತರಾಗಿ ವಿಜಯಲಕ್ಷ್ಮೀ ಆದಿ, ಬಾಬುರಾವ್ ಯಡ್ರಾಮಿ, ಸಂಗಮನಾಥ ರೇವತಗಾಂವ, ಚಂದಮ್ಮ ಗೋಲಾಮ, ಸುಧಾಮ ಧನ್ನಿ, ಶಿವಪುತ್ರಪ್ಪ ಭಾವಿ, ಶ್ರವಣಕುಮಾರ ಮುನೋಳಿ ಹಾಗೂ ಚಂದ್ರಕಾಂತ ಮುನೋಳಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದೇವದಾಸಿ ಯುವಕ–ಯುವತಿಯರಿಗೆ ವಚನ ಮಾಂಗಲ್ಯ ಕಲ್ಯಾಣೋತ್ಸವ

ಉತ್ಸವದ ಅಂಗವಾಗಿ ದೇವದಾಸಿ ಯುವಕ–ಯುವತಿಯರ ಸರಳ ವಚನ ಮಾಂಗಲ್ಯ ಕಲ್ಯಾಣ ಮಹೋತ್ಸವ ನಡೆಯಲಿದೆ. ದೇವದಾಸಿ ಮಕ್ಕಳಿಗೆ ಪದವಿ ಪೂರ್ವದಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣದ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಕಾಯಕ ಸಮುದಾಯದ ಮಠಾಧೀಶರಿಗೆ ಗೌರವ ಪುರಸ್ಕಾರ ನೆರವೇರಲಿದೆ ಎಂದು ಡಾ. ಶ್ರೀಶೈಲ ಮಸೂತೆ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್.ಬಿ. ಶಿವರುದ್ರಪ್ಪ, ನಾಗೇಂದ್ರಪ್ಪ ನಿಂಬರ್ಗಿ, ಕೋದಂಡರಾಮಪ್ಪ, ನೀಲಾ, ಶ್ವೇತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button