ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವಿಜ್ಞಾನ ಮಾದರಿಗಳ ಪ್ರದರ್ಶನ

ಕಲಬುರಗಿ, ಸೆ.30: ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ಸಂಚಾರಿ ವಿಜ್ಞಾನ ಪ್ರದರ್ಶನ ನಡೆಯಿತು.
ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರಲ್ಲಿ ವೈಜ್ಞಾನಿಕ ತಿಳಿವಳಿಕೆ ಮೂಡಿಸುವುದು, ನೀರಿನ ಬಳಕೆ ಹಾಗೂ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕುವ ಉದ್ದೇಶದಿಂದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.
ನೀರಿನ ಹೆಜ್ಜೆಗುರುತು, ನೀರಿನ ಪೂರೈಕೆ ಮತ್ತು ಬೇಡಿಕೆ, ಜಲ ಸಂರಕ್ಷಣೆ, ನೀರಿನಿಂದ ಹರಡುವ ಕಾಯಿಲೆಗಳು, ರಾಸಾಯನಿಕ ವಿಜ್ಞಾನ ಮತ್ತು ಬಾಹ್ಯಾಕಾಶ, ಮಾನವ ದೇಹದಲ್ಲಿರುವ ರಾಸಾಯನಿಕಗಳು, ಮಾನವನ ಭಾವನೆಗಳು, ಮಿಶ್ರಲೋಹಗಳ ರಾಸಾಯನಿಕ ವಿಜ್ಞಾನ, ದೇಹದಲ್ಲಿನ ನೀರು ಹಾಗೂ ನೀರಿನ ಗುಣಧರ್ಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಯಿತು.
ವಿಜ್ಞಾನ ಪ್ರದರ್ಶನದ ಮೂಲಕ ವಿದ್ಯಾರ್ಥಿನಿಯರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರೇರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಸುಭಾಷ್ ಮೇತ್ರೆ, ಲಕ್ಷ್ಮೀಕಾಂತ ಜಮಾದಾರ, ದಿಲೀಪಕುಮಾರ ಜತ್ತಿ, ಮಹಾವಿದ್ಯಾಲಯದ ಬೋಧಕರಾದ ಡಾ. ಪುಟ್ಟಮಣಿ ದೇವಿದಾಸ, ಡಾ. ಸಿದ್ಧಲಿಂಗರೆಡ್ಡಿ, ಡಾ. ಪ್ರತಿಭಾ ಪಾಟೀಲ, ಕೃಪಾಸಾಗರ ಗೊಬೂರ್, ಡಾ. ಶ್ವೇತಾ, ಡಾ. ಮಹಾಲಕ್ಷ್ಮೀ, ಡಾ. ಆಮ್ರಪಾಲಿ, ಪ್ರಸಾದ್, ಆದರ್ಶ, ಡಾ. ಪೂರ್ಣಿಮಾ, ಶ್ರೀಲಕ್ಷ್ಮೀ, ನಸ್ರೀನ್, ಪೂಜಾ ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



