ಪಿಡಿಎ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಿಂದ ಶಿಕ್ಷಕರ ಕ್ಷೇತ್ರದ ಅಕ್ರಮ ಮತದಾರರ ಪಟ್ಟಿ: ಜಮಾದಾರ್ ಆರೋಪ

ಕಲಬುರಗಿ, ಸೆ.24: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಕ್ರಮ ಮತದಾರರ ಪಟ್ಟಿ ಸಿದ್ಧಪಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 335, 336 ಹಾಗೂ 338ರಡಿ ಪ್ರಕರಣ ದಾಖಲಿಸಿ, ಸಂಸ್ಥೆಯ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅಹಿಂದ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಗೆ ಶಿಕ್ಷಕರಲ್ಲದ ಸಿಬ್ಬಂದಿಯ ಹೆಸರುಗಳನ್ನು ಸೇರಿಸುವ ಮೂಲಕ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಇಂತಹ ಕ್ರಮಗಳು ಜನಪ್ರತಿನಿಧಿತ್ವ ಕಾಯ್ದೆ-1950ರ ಸೆಕ್ಷನ್ 31 ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಬಹುದು ಎಂದು ಅವರು ಹೇಳಿದರು.
ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅನರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು. ಮತದಾರರ ಪಟ್ಟಿಯಲ್ಲಿ ಅಕ್ರಮ ಹಾಗೂ ಸುಳ್ಳು ದಾಖಲೆಗಳನ್ನು ನೀಡುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಮತದಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹ ಶಿಕ್ಷಕರ ಮತದಾರರ ನೋಂದಣಿಗೆ ಕಡ್ಡಾಯ ಕ್ರಮ ಕೈಗೊಳ್ಳಬೇಕು ಎಂದು ಜಮಾದಾರ್ ಆಗ್ರಹಿಸಿದರು.
ತುರಾತುರಿಯಲ್ಲಿ ಚುನಾವಣೆ ನಡೆಸದೆ, ಅಕ್ರಮ ಮತದಾರರನ್ನು ಕೈಬಿಟ್ಟು ಅರ್ಹ ಶಿಕ್ಷಕರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಅನುದಾನದ ಕುರಿತು ಮಾಹಿತಿ ನೀಡಲು ಆಗ್ರಹ
ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಕೆಲವು ವಿಭಾಗಗಳು ಮಾತ್ರ ಅನುದಾನಕ್ಕೆ ಒಳಪಟ್ಟಿವೆ. ಈ ಕುರಿತು ಮಾಹಿತಿ ಹಕ್ಕು ಆಯೋಗಕ್ಕೆ ಮಾಹಿತಿ ಕೋರಿದಾಗ, ಸರ್ಕಾರದಿಂದ ಶೇ.95ಕ್ಕಿಂತ ಹೆಚ್ಚಿನ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಆರ್‌ಟಿಐ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದಾಗಿ ತಿಳಿಸಲಾಯಿತು ಎಂದು ಜಮಾದಾರ್ ಹೇಳಿದರು.
ಆದರೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸರ್ಕಾರದಿಂದ ಕೇವಲ ಶೇ.85ರಷ್ಟು ವೇತನ ನೀಡಲಾಗುತ್ತಿದೆ ಎಂದು ತಿಳಿದುಬಂದಿದ್ದು, ಈ ಕುರಿತು ಕಾಲೇಜಿನಿಂದ ಯಾವುದೇ ಮಾಹಿತಿ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಈ ಎಲ್ಲ ಅಂಶಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಅಕ್ರಮಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಬಣ್ಣ ಜಮಾದಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ಗುತೇದಾರ್, ರಮೇಶ್ ಹಡಪದ್, ಸಂಜು ಹೊಡಲ್ಕರ್, ಪ್ರಕಾಶ್ ಪಟ್ಟೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



