ಕನಿಷ್ಠ ವೇತನ ಜಾರಿಗೆ ಆಗ್ರಹ: ಸೆ.25ರಿಂದ ಶಾಸಕರು, ಸಚಿವರ ಮನೆ ಮುಂದೆ ಸಿಐಟಿಯು ಪ್ರತಿಭಟನೆ

ಕಲಬುರಗಿ, ಸೆ.22: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಿ, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೆ ತರಬೇಕು, ಸ್ಕೀಂ ನೌಕರರಿಗೆ ಕಾಯಂ ಸ್ಥಾನಮಾನ ನೀಡಬೇಕು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸೆ.25ರಿಂದ ಶಾಸಕರು ಹಾಗೂ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆ.8ರಂದು ಸಿಐಟಿಯು ಸಂಯೋಜಿತ 184 ಸಂಘಟನೆಗಳ ನೇತೃತ್ವದಲ್ಲಿ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ ನೌಕರರು, ಬೀಡಿ, ಪ್ಲಾಂಟೇಷನ್, ಟೈಲ್ಸ್ ಕಾರ್ಮಿಕರು, ಆಟೋ, ಟ್ಯಾಕ್ಸಿ, ಕೆಎಸ್ಆರ್ಟಿಸಿ, ಬಿಎಂಟಿಸಿ ಚಾಲಕ ಸಿಬ್ಬಂದಿ, ಕಟ್ಟಡ, ಹಮಾಲಿ, ಮನೆಗೆಲಸದವರು, ಟೈಲರ್ಗಳು, ಬೀದಿ ಬದಿ ವ್ಯಾಪಾರಿಗಳು, ಹಾಸ್ಟೆಲ್ ನೌಕರರು, ಗುತ್ತಿಗೆ ಹಾಗೂ ಕೈಗಾರಿಕಾ ಕಾರ್ಮಿಕರು ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದರು.
ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮನವಿ ಸ್ವೀಕರಿಸಿದ್ದರು. ಮುಖ್ಯಮಂತ್ರಿಗಳು ಸೆ.15ರಂದು ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಆದರೆ, ಕಾರ್ಮಿಕರೊಂದಿಗೆ ಸಭೆ ನಡೆಸದೆ ಸರ್ಕಾರ ನೀಡಿದ್ದ ಮಾತಿನಿಂದ ಹಿಂದೆ ಸರಿದಿರುವುದನ್ನು ಖಂಡಿಸಿ ಸೆ.25ರಿಂದ ಮತ್ತೆ ಹೋರಾಟ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಪ್ಲಾಂಟೇಷನ್, ಬೀಡಿ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರನ್ನು ಹೊಸ ಕನಿಷ್ಠ ವೇತನ ಅಧಿಸೂಚನೆಯಲ್ಲಿ ಸೇರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಸ್ಕೀಂ ನೌಕರರಿಗೆ ಕಾಯಂ ಸ್ಥಾನಮಾನ ನೀಡಬೇಕು. ಕನಿಷ್ಠ ವೇತನದ ವ್ಯಾಪ್ತಿಗೆ ಎಲ್ಲ ಕಾರ್ಮಿಕರನ್ನು ತರಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರಿಗೆ ₹7 ಸಾವಿರ, ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಹಾಗೂ ಅಂಗನವಾಡಿ ನೌಕರರಿಗೆ ₹15 ಸಾವಿರ ಬಾಕಿ ವೇತನ ನೀಡಬೇಕು. ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಪದ್ಧತಿ ರದ್ದುಪಡಿಸಲು ಆಗ್ರಹ
ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಕಾಯಂಗೊಳಿಸಲು ಅಗತ್ಯವಿರುವ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಕೆಎಸ್ಆರ್ ನಿಯಮಗಳನ್ನು ತಿದ್ದುಪಡಿ ಮಾಡಿ ಸೌಲಭ್ಯ ಕಲ್ಪಿಸಬೇಕು. ಇಎಸ್ಐ, ಪಿಎಫ್, ಗ್ರಾಚ್ಯುಟಿ ಹಾಗೂ ಬೋನಸ್ ಸೌಲಭ್ಯಗಳನ್ನು ಪಡೆಯಲು ಇರುವ ಮಿತಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಆಹಾರ, ಆರೋಗ್ಯ, ಶಿಕ್ಷಣ ಖಾಸಗೀಕರಣ ತಡೆಗೆ ಒತ್ತಾಯ
ಆಹಾರ, ಆರೋಗ್ಯ ಹಾಗೂ ಶಿಕ್ಷಣ ಸೇವೆಗಳ ಗುಣಮಟ್ಟ ಹೆಚ್ಚಿಸಿ, ಅವುಗಳ ಖಾಸಗೀಕರಣವನ್ನು ತಡೆಯಬೇಕು. ವಿದ್ಯುತ್ ಮತ್ತು ಸಾರಿಗೆ ಸಂಸ್ಥೆಗಳು ಸೇರಿದಂತೆ ಯಾವುದೇ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಹೇಳಿದರು.
ವಸತಿ ರಹಿತ ಕಾರ್ಮಿಕರಿಗೆ ವಸತಿ ಕಲ್ಪಿಸಬೇಕು. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಸಜ್ಜನ್, ಮೀನಾಕ್ಷಿ ಸುಂದರಂ, ಶಾಂತಾ ಘಂಟಿ, ಜಮೀರ್ ಅಹ್ಮದ್, ನಾಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.



