ಜಿಲ್ಲಾಸುದ್ದಿ

ಆಳಂದಕ್ಕೆ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ನಿತಿನ್ ಗುತ್ತೇದಾರ್ ಆಗ್ರಹ

ಅಫಜಲಪುರ, ಸೆ.22: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಹಿಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಆಗ್ರಹಿಸಿದರು.

ಆಳಂದ ತಾಲ್ಲೂಕಿಗೆ ನೀರು ಹರಿಸುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ನಿತಿನ್ ಗುತ್ತೇದಾರ್, ಅಫಜಲಪುರ ತಾಲ್ಲೂಕಿನ ಅಮರ್ಜಾ ಡ್ಯಾಂ ಹಾಗೂ ಕೆರೆಗಳನ್ನು ಅವೈಜ್ಞಾನಿಕವಾಗಿ ತುಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಸೋನ್ನ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಆಳಂದಕ್ಕೆ ನೀರು ಹರಿಸುವ ಮೂಲಕ ಸ್ಥಳೀಯ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕೆಕೆಆರ್‌ಡಿಬಿ, ಸಕ್ಕರೆ ಕಾರ್ಖಾನೆ, ವಿವಿಧ ಅನುದಾನಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಸುಮಾರು ಎಂಟು ದಶಕಗಳ ನಂತರ ಶೇ.65ರಷ್ಟು ಮಳೆ ಕೊರತೆ ಎದುರಾಗಿದೆ ಎಂದು ಹೇಳಿದರು. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಸೋನ್ನ ಬ್ಯಾರೇಜ್ ನಿರ್ಮಿಸಿ ₹100 ಕೋಟಿ ಅನುದಾನ ನೀಡಲಾಗಿತ್ತು. ಆದರೆ ಈಗ ₹1,200 ಕೋಟಿಗೂ ಅಧಿಕ ಹಣ ಖರ್ಚಾದರೂ ಸಮರ್ಪಕವಾಗಿ ನೀರಾವರಿ ಯೋಜನೆ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ಅಫಜಲಪುರ ತಾಲ್ಲೂಕಿನ ರೈತರಿಗೆ ನೀರಿನ ಕೊರತೆ ಇರುವ ಸಂದರ್ಭದಲ್ಲಿ ನೆರೆಯ ಆಳಂದ ತಾಲ್ಲೂಕಿಗೆ ನೀರು ಹರಿಸುವುದನ್ನು ವಿರೋಧಿಸಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ವಿಶ್ವನಾಥ ರೇವೂರ್ ಮಾತನಾಡಿ, ಮಾಶಾಳ-3 ಹಾಗೂ ಕರಜಗಿ-1 ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದು ಹಲವು ವರ್ಷಗಳು ಕಳೆದರೂ ಕೆರೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ ಎಂದು ಆರೋಪಿಸಿದರು. ಚುನಾವಣೆ ಸಮೀಪಿಸಿದಾಗ ಅಲ್ಲಲ್ಲಿ ಪೈಪ್ ಅಳವಡಿಸಿ ನೀರು ಹರಿಸುವುದಾಗಿ ತೋರಿಸಿ ಜನರನ್ನು ಮರಳು ಮಾಡಲಾಗುತ್ತಿದೆ ಎಂದು ಶಾಸಕರ ವಿರುದ್ಧ ಆರೋಪ ಮಾಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿದ್ಯಾಧರ ಮಂಗಲೂರೆ ಮಾತನಾಡಿ, ಆಳಂದ ತಾಲ್ಲೂಕಿನ ಕೆರೆಗಳು ಹಾಗೂ ಅಮರ್ಜಾ ಡ್ಯಾಂ ತುಂಬಿಸುವ ಆಸಕ್ತಿ ಶಾಸಕರಿಗೆ ಹೆಚ್ಚಾಗಿದೆ. ತಮ್ಮ ಭಾಗದಲ್ಲೇ ನೀರಿನ ಕೊರತೆ ಇರುವಾಗ ಆಳಂದಕ್ಕೆ ನೀರು ಹರಿಸುವುದು ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಆಳಂದಕ್ಕೆ ತೆರಳಿ ಜನರ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಶಾಸಕರಿಗೆ ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ರಮೇಶ್ ಬಾಕೆ, ಬಸವರಾಜ ವಾಳಿ, ಸುನೀಲ್ ಶೆಟ್ಟಿ, ಚಂದಮ್ಮ ಪಾಟೀಲ, ಶರಣು ಪದಕಿ, ಧಾನು ಪತಾಟೆ, ಶೈಲೇಶ್ ಗುಣಾರಿ, ಶಿವಶರಣಪ್ಪ ಪಡಶೆಟ್ಟಿ, ಸುಭಾಷ್ ಚಂದ್ರ ರಾಠೋಡ್, ಶರಣು ದಿವಾಂಜಿ, ಶಮಶೋದ್ದಿನ್ ಅಕ್ತರ್, ಬಸವರಾಜ ಮಾಲಗತ್ತಿ, ಸುರೇಖಾ ಪದಕಿ, ವಿಜಯಕುಮಾರ ದೇಸಾಯಿ, ಬಸವರಾಜ ಸಪ್ಪನಗೋಳ, ನೂರ ಅಹ್ಮದ್ ಭಾಗವಾನ್, ಪುಟ್ಟು ಹೂಗಾರ, ತನ್ವೀರ್ ಮಣ್ಣೂರು, ಸಿದ್ದು ರಾಣಿ, ಅನಿಲ್ ಸೋನ್ನ, ರಾಚಯ್ಯ ಮಠ, ಅನಿಲ್ ನಾವಿ, ಸಚಿನ್ ಮ್ಯಾಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button