ಕೆಪಿಎಂಇ ಪ್ರಾಧಿಕಾರದ ದಂಡ ರದ್ದುಪಡಿಸಿದ ಹೈಕೋರ್ಟ್

ಕಲಬುರಗಿ, ಸೆ.21: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಪ್ರಾಧಿಕಾರ ವಿಧಿಸಿದ್ದ ದಂಡವನ್ನು ಹೈಕೋರ್ಟ್ ರದ್ದುಪಡಿಸಿದೆ ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ಅಧ್ಯಕ್ಷ ಡಾ. ಸಿದ್ದಪ್ಪ ಮಾಂಗಿರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಕೆಪಿಎಂಇ ಪ್ರಾಧಿಕಾರವು ಕಾಯ್ದೆ ಉಲ್ಲಂಘನೆಯ ಹೆಸರಿನಲ್ಲಿ ಭಾರತೀಯ ವೈದ್ಯ ಪದ್ಧತಿಯ ವೈದ್ಯರಿಗೆ ₹50 ಸಾವಿರದವರೆಗೆ ದಂಡ ವಿಧಿಸುವುದು ಹಾಗೂ ನೋಟಿಸ್‌ಗಳನ್ನು ನೀಡುವ ಮೂಲಕ ಅನಗತ್ಯ ಕಿರುಕುಳ ನೀಡುತ್ತಿತ್ತು ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನೋಂದಾಯಿತ ವೈದ್ಯರು ಸಂಘದ ಸಹಕಾರದೊಂದಿಗೆ ಕಲಬುರಗಿ ಪೀಠದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್, ಅರ್ಜಿದಾರರ ವಾದವನ್ನು ಪರಿಗಣಿಸಿ ಕೆಪಿಎಂಇ ಪ್ರಾಧಿಕಾರ ವಿಧಿಸಿದ್ದ ದೋಷದಂಡನಾತ್ಮಕ ಆದೇಶವನ್ನು ರದ್ದುಪಡಿಸಿದೆ ಎಂದು ತಿಳಿಸಿದರು.
ಇದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸಂಘದ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಡಾ. ಸಿದ್ದಪ್ಪ ಮಾಂಗಿರಿ ಹೇಳಿದರು.
ಭಾರತೀಯ ವೈದ್ಯ ಪದ್ಧತಿಯ ವೈದ್ಯರಿಗೆ ‘ನಕಲಿ ವೈದ್ಯರು’ ಎಂಬ ಆರೋಪದಡಿ ಹಲವು ಬಾರಿ ನೋಟಿಸ್ ನೀಡಿ ದಂಡ ವಿಧಿಸುವ ಮೂಲಕ ಪ್ರಾಧಿಕಾರ ಕಿರುಕುಳ ನೀಡುತ್ತಿತ್ತು. ಇತರೆ ರಾಜ್ಯಗಳಲ್ಲಿ ಭಾರತೀಯ ವೈದ್ಯ ಪದ್ಧತಿಯ ವೈದ್ಯರಿಗೆ ಉತ್ತಮ ಅವಕಾಶಗಳಿದ್ದರೂ ಕರ್ನಾಟಕದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ರಾಧಿಕಾ ಖಟವಾಟೆ, ಡಾ. ಗುರುರಾಜ ಜಗಳಿ, ಡಾ. ಬಾಬು ಮೆನನ್, ಡಾ. ಪ್ರಕಾಶ್ ಘಟನಟ್ಟಿ, ಡಾ. ನ. ಗುಂಡಗುರ್ಥಿ, ಡಾ. ಧನಂಜಯ ಸಂಗಾಣಿ, ಡಾ. ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.



