ಜಿಲ್ಲಾಸುದ್ದಿ

ಗಣಗಾಪುರ ದತ್ತಾತ್ರೇಯ ದೇವಸ್ಥಾನದ ಧಾರ್ಮಿಕ ಹಕ್ಕಿಗಾಗಿ ನ್ಯಾಯಾಲಯದ ಮೊರೆ: ಜಾಗೀರದಾರ್ ಕುಟುಂಬ

ಪಾರಂಪರಿಕ ಧಾರ್ಮಿಕ ಸೇವೆಗಳಿಗೆ ಅರ್ಚಕರಿಂದ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪ; ಗುರು ದ್ವಾದಶಿ ಉತ್ಸವ ಆಚರಣೆಯ ಹಕ್ಕು ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋದ ಕುಟುಂಬ.

ಕಲಬುರಗಿ, ನ. 11: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಜಾಗೀರದಾರ್ ಮನೆತನದವರು ತಲೆತಲಾಂತರಗಳಿಂದ ನಡೆಸಿಕೊಂಡು ಬರುತ್ತಿರುವ ಪಾರಂಪರಿಕ ಧಾರ್ಮಿಕ ಸೇವೆಗಳಿಗೆ ಕೆಲವು ಅರ್ಚಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಕುಟುಂಬದ ಸದಸ್ಯರು, ತಮ್ಮ ಧಾರ್ಮಿಕ ಹಕ್ಕು ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಹರೀಶ್ ಚೌದಾಪುರಕರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದತ್ತಾತ್ರೇಯ ಕ್ಷೇತ್ರದೊಂದಿಗೆ ತಮ್ಮ ಜಾಗೀರದಾರ್ ಮನೆತನ ಹೊಂದಿರುವ ಸಂಬಂಧ ಇಂದಿನದಲ್ಲ. ಅದು ಪೂರ್ವಜರಿಂದ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಐತಿಹಾಸಿಕ ಮತ್ತು ಧಾರ್ಮಿಕ ಸಂಬಂಧವಾಗಿದೆ. ತಮ್ಮ ಮನೆತನದ ಪಾರಂಪರಿಕ ಸೇವೆಗಳನ್ನು ಉಳಿಸಿಕೊಳ್ಳುವುದು ಕೇವಲ ಹಕ್ಕು ಮಾತ್ರವಲ್ಲ, ಪೂರ್ವಜರು ನೀಡಿರುವ ಜವಾಬ್ದಾರಿಯೂ ಆಗಿದೆ ಎಂದರು.

ತಮ್ಮ ಉದ್ದೇಶ ಯಾರನ್ನೂ ನೋಯಿಸುವುದಾಗಲಿ, ಯಾರ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುವುದಾಗಲಿ ಅಲ್ಲ. ಸತ್ಯಾಂಶಗಳು, ಐತಿಹಾಸಿಕ ದಾಖಲೆಗಳು ಮತ್ತು ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಪಾರಂಪರಿಕ ಸಂಪ್ರದಾಯವನ್ನು ಉಳಿಸಿಕೊಳ್ಳುವುದೇ ತಮ್ಮ ಏಕೈಕ ಉದ್ದೇಶವಾಗಿದೆ. ಪ್ರತಿಯೊಂದು ಆರೋಪಕ್ಕೂ ಸಂಬಂಧಿಸಿದ ದಾಖಲೆ, ನ್ಯಾಯಾಲಯದ ಆದೇಶ, ಪೊಲೀಸ್ ದಾಖಲೆ ಹಾಗೂ ಹಳೆಯ ಪಾರಂಪರಿಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸಾಬೀತಾಗದ ಆರೋಪಗಳನ್ನು ಅಂತಿಮ ಸತ್ಯವೆಂದು ಪರಿಗಣಿಸದೆ, ತಮ್ಮ ಆಕ್ಷೇಪಣೆಗಳನ್ನು ದಾಖಲೆಗಳ ಆಧಾರದ ಮೇಲೆ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗಣಗಾಪುರದ ಜಾಗೀರದಾರ್ ಮನೆತನದ ಇತಿಹಾಸ, ಪರಂಪರೆ ಹಾಗೂ ಧಾರ್ಮಿಕ ಸೇವೆಗಳ ಕುರಿತು ವಿವರಿಸಿದ ಅವರು, ಅನೇಕ ವರ್ಷಗಳಿಂದ ಕ್ಷೇತ್ರದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಮನೆತನದ ಕೊಡುಗೆ ಇದೆ ಎಂದು ತಿಳಿಸಿದರು.

ಗಣಗಾಪುರದ ಶ್ರೀ ದತ್ತ ಮಠದಲ್ಲಿ ತಮ್ಮ ಮನೆತನದವರು ತಲೆತಲಾಂತರಗಳಿಂದ ಕೆಲವು ಪಾರಂಪರಿಕ ಧಾರ್ಮಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವುಗಳಲ್ಲಿ ನಿತ್ಯ ನೈವೇದ್ಯ ಸೇವೆ, ಪ್ರತಿ ದ್ವಾದಶಿಯಂದು ಮಹಾ ನೈವೇದ್ಯ ಸೇವೆ, ಗುರು ದ್ವಾದಶಿ ಮಹೋತ್ಸವ, ಶ್ರೀ ದತ್ತ ಜಯಂತಿ ಉತ್ಸವ ಹಾಗೂ ಸಾಡೇ ಮೂರು ಮುಹೂರ್ತಗಳಲ್ಲಿ ವಿಶೇಷ ದರ್ಶನದ ಭಾಗ್ಯ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಸೇರಿವೆ. ಮಠದೊಂದಿಗೆ ತಮ್ಮ ಮನೆತನವು ಸಂಪ್ರದಾಯಬದ್ಧ ಧಾರ್ಮಿಕ ಸಂಬಂಧ ಹೊಂದಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ತಮ್ಮ ಮನೆತನದ ವಿರುದ್ಧ ಕೆಲವು ಬೆಳವಣಿಗೆಗಳು ನಡೆಯುತ್ತಿದ್ದು, ಕೆಲವು ಅರ್ಚಕರಿಂದ ಪಾರಂಪರಿಕ ಧಾರ್ಮಿಕ ಕರ್ಮಕಾಂಡ ಮತ್ತು ಸೇವೆಗಳನ್ನು ಸ್ಥಗಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಪೂರ್ವಜರಿಂದ ನಡೆದುಕೊಂಡು ಬಂದ ಸಂಪ್ರದಾಯಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ಗುರು ದ್ವಾದಶಿ ಉತ್ಸವ ಆಚರಣೆಯ ಹಕ್ಕು ಹಾಗೂ ಧಾರ್ಮಿಕ ಆಚರಣೆಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಹೇಳಿದರು.

ನ್ಯಾಯಾಲಯದ ಆದೇಶ ಪಡೆದು ಪೊಲೀಸ್ ರಕ್ಷಣೆಯೊಂದಿಗೆ ಶ್ರೀ ದತ್ತ ಮಠದಲ್ಲಿ ತಮ್ಮ ಮನೆತನದ ಪಾರಂಪರಿಕ ಗುರು ದ್ವಾದಶಿ ಉತ್ಸವವನ್ನು ಆಚರಿಸಲಾಗಿದೆ. ನ್ಯಾಯಾಂಗದ ಆದೇಶಗಳನ್ನು ಗೌರವಿಸಬೇಕು ಮತ್ತು ಪಾರಂಪರಿಕ ಆಚರಣೆಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಮನೆತನದ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಕೆಲವು ಅರ್ಚಕರು ಸೂಕ್ತ ಆಧಾರವಿಲ್ಲದೆ ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಅವಹೇಳನಕಾರಿ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಮನೆತನದ ಗೌರವ, ಪ್ರತಿಷ್ಠೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಗದ್ಗುರುಗಳ ಹೆಸರನ್ನು ಬಳಸಿಕೊಂಡು ತಮ್ಮ ಪಾರಂಪರಿಕ ಉತ್ಸವಗಳಿಗೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಆರೋಪಿಸಿದ ಅವರು, ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಅವರ ಹೆಸರನ್ನು ಯಾವುದೇ ವಿವಾದಕ್ಕೆ ಬಳಸಬಾರದು ಎಂದು ಮನವಿ ಮಾಡಿದರು.

ಅರ್ಚಕರ ವಿರುದ್ಧ ಕೆಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಮಠದ ಆಡಳಿತದ ಕುರಿತೂ ಅಸಮಾಧಾನವಿದೆ ಎಂದು ತಿಳಿಸಿದ ಅವರು, ಸಂಬಂಧಪಟ್ಟ ಪ್ರಕರಣಗಳು ನ್ಯಾಯಾಂಗದ ಪರಿಶೀಲನೆಯಲ್ಲಿವೆ ಎಂದರು. ಮಠದ ಆಡಳಿತ ಮತ್ತು ಧಾರ್ಮಿಕ ಶಿಸ್ತು ಕಾಪಾಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮಠದ ಗೌರವ ಹಾಗೂ ಭಕ್ತರ ನಂಬಿಕೆಯನ್ನು ಉಳಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಾರಂಪರಿಕ ಸೇವೆಗಳಿಗೆ ಯಾವುದೇ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳಬೇಕು. ತಮ್ಮ ಮನೆತನದ ಧಾರ್ಮಿಕ ಸಂಪ್ರದಾಯಗಳಿಗೆ ಗೌರವ ನೀಡಬೇಕು. ಭಕ್ತರು ಮತ್ತು ಅರ್ಚಕರ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.

ತಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧವಲ್ಲ. ಪೂರ್ವಜರಿಂದ ಬಂದಿರುವ ಇತಿಹಾಸ, ಪರಂಪರೆ ಮತ್ತು ಧಾರ್ಮಿಕ ಸೇವೆಗಳ ಉಳಿವಿಗಾಗಿ ಕಾನೂನು ಮತ್ತು ನ್ಯಾಯಾಂಗದ ಮೇಲೆ ಸಂಪೂರ್ಣ ಗೌರವವಿಟ್ಟು ಹೋರಾಟ ಮುಂದುವರಿಸುವುದಾಗಿ ಹರೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭೀಮರಾವ್, ಶ್ರೀಪಾದ, ಗೋವಿಂದ್, ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button