ವಿಘ್ನೇಶ್ವರನನ್ನು ಪೂಜಿಸಿದರೆ ವಿಘ್ನಗಳು ನಿವಾರಣೆ: ಬಸವಲಿಂಗ ಅವಧೂತರು

ಬೀದರ್, ಸೆ.18: ಮಹಾಗಣೇಶ ವಿಘ್ನೇಶ್ವರನನ್ನು ಭಕ್ತಿಯಿಂದ ಪೂಜಿಸಿದರೆ ಜೀವನದ ಹಾದಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ತಾಲ್ಲೂಕಿನ ಕಪಲಾಪುರ (ಎ) ಗ್ರಾಮದಲ್ಲಿ ರಾಮ ಗಣೇಶ ಮಂಡಳಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಚಿಂತೆಯಿಂದ ತುಂಬಿದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಕಷ್ಟದ ಸಂದರ್ಭದಲ್ಲಿ ದೇವರು ಮನುಷ್ಯನಿಗೆ ಧೈರ್ಯ ಹಾಗೂ ಸನ್ಮಾರ್ಗ ತೋರಿಸುತ್ತಾನೆ ಎಂದರು.
ಯಾರೂ ಯಾವುದೇ ಕೆಲಸವನ್ನು ತೋರಿಕೆಗಾಗಿ ಮಾಡಬಾರದು. ಸತ್ಯದ ನೆಲೆಯನ್ನು ಕಂಡುಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಬಸವಾದಿ ಶರಣರು ನಡೆದಾಡಿದ ಈ ಭೂಮಿ ಪವಿತ್ರವಾಗಿದ್ದು, ಈ ನೆಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ಹೇಳಿದರು. ಶರಣರು ರಚಿಸಿದ ವಚನ ಸಾಹಿತ್ಯವನ್ನು ಓದಿ ಸರಳ ಜೀವನದ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ದುಶ್ಚಟಗಳಿಗೆ ದಾಸರಾದವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಆದ್ದರಿಂದ ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಗೌರವದಿಂದ ಬದುಕಬೇಕು. ಗ್ರಾಮದಲ್ಲಿ ಎಲ್ಲ ಜಾತಿ, ಧರ್ಮದ ಜನರು ಪರಸ್ಪರ ಸಹೋದರರಂತೆ ಬಾಳಬೇಕು ಎಂದು ಕರೆ ನೀಡಿದರು.
ತಂತ್ರಜ್ಞಾನ ಯುಗದಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುತ್ತಿಲ್ಲ. ಅವಿಭಕ್ತ ಕುಟುಂಬ ಪದ್ಧತಿಯ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಜೀವನದ ಮೌಲ್ಯಗಳನ್ನು ಕಲಿಸಲು ಸಾಧ್ಯ ಎಂದು ಬಸವಲಿಂಗ ಅವಧೂತರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಗಣೇಶ ಮೂರ್ತಿಗೆ ಡಾ. ಬಸವಲಿಂಗ ಅವಧೂತರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮನಾಥ ಕೋಟೆ, ಆದರ್ಶ ಕೋಳಾರೆ, ಸಂಗಮೇಶ ಬಿರಾದಾರ, ಪ್ರಶಾಂತ ಕೋಟೆ, ಆಶೀಷ್, ಮಹೇಶ್, ವೀರೇಶ್, ಅರವಿಂದ ವಟಗೆ, ಶಿವು ಉಮರ್ಗೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



