ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಚಿತ್ತಾಪುರ, ಸೆ.13: ಗಣೇಶ ಚತುರ್ಥಿ ಹಬ್ಬವನ್ನು ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶಾಂತಿಯುತವಾಗಿ, ಸಡಗರ ಹಾಗೂ ಸಂಭ್ರಮದಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ತಾಪುರ ಶಾಂತಿಪ್ರಿಯ ತಾಲೂಕು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಯಾವುದೇ ಸಮುದಾಯದ ಹಬ್ಬವಾಗಿರಲಿ, ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಸೌಹಾರ್ದಯುತವಾಗಿ ಆಚರಿಸುವ ಪರಂಪರೆ ಇಲ್ಲಿದೆ. ಕಳೆದ 12 ವರ್ಷಗಳ ಸೇವಾವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವುದನ್ನು ತಾವು ಕಂಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣೇಶ ಮಂಡಳಿಯವರು ಕನಿಷ್ಠ ಐದು ಮಂದಿ ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗಣೇಶನ ಭಾವಚಿತ್ರವಿರುವ ಬ್ಯಾನರ್‌ಗಳಲ್ಲಿ ಸಭ್ಯತೆ ಕಾಪಾಡಬೇಕು. ಕಾನೂನಿನ ಚೌಕಟ್ಟಿನಲ್ಲಿಯೇ ಹಬ್ಬ ಆಚರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಗಣೇಶ ಮಂಡಳಿಯವರು ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳ, ಎಷ್ಟು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುತ್ತದೆ ಹಾಗೂ ವಿಸರ್ಜನೆ ವೇಳೆ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಮುಂಚಿತವಾಗಿ ನೀಡಬೇಕು. ಇದರಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತದೆ ಎಂದರು.
ಪ್ರತಿ ವರ್ಷ ದೇಶಮುಖ ಅವರ ಬಾವಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಾವಿ ಸಂಪೂರ್ಣ ಮುಚ್ಚಿರುವ ಹಿನ್ನೆಲೆಯಲ್ಲಿ ಮಳಖೇಡ ರಸ್ತೆಯಲ್ಲಿರುವ ಸೈಂಧಿ ಡಿಪೋ ಬಾವಿಯಲ್ಲಿ ವಿಸರ್ಜನೆ ಮಾಡಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಡಿವೈಎಸ್ಪಿ ತಿಳಿಸಿದರು.
ಪಿಎಸ್‌ಐ ಮಂಜುನಾಥರೆಡ್ಡಿ ಮಾತನಾಡಿ, ಗಣೇಶ ಚತುರ್ಥಿಯಂದು ಗಣೇಶ ಪ್ರತಿಷ್ಠಾಪನೆ ಮಾಡುವ ಪ್ರತಿಯೊಂದು ಮಂಡಳಿಯವರು ಸ್ಥಳೀಯ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದ ಪೆಂಡಾಲ್‌ಗಳನ್ನು ನಿರ್ಮಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡಬಾರದು. ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ದೊಡ್ಡ ಪ್ರಮಾಣದ ಜ್ವಾಲೆಗಳನ್ನು ಬಳಸುವುದನ್ನು ತಪ್ಪಿಸಬೇಕು. ಸಣ್ಣ ಪ್ರಮಾಣದ ಜ್ವಾಲೆಗಳನ್ನೇ ಬಳಸಬೇಕು ಎಂದು ಮನವಿ ಮಾಡಿದರು.
ಪುರಸಭೆಯ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಮಾಡುವ ಪ್ರತಿಯೊಬ್ಬರಿಗೂ ದೊಡ್ಡ ಜ್ವಾಲೆ ಹಚ್ಚಬೇಕೆಂಬ ಆಸೆ ಇರುತ್ತದೆ. ಆದರೆ ಪೊಲೀಸ್ ಇಲಾಖೆಯು ಐದು, ಒಂಬತ್ತು ಹಾಗೂ ಹನ್ನೊಂದು ದಿನಗಳ ಗಣೇಶ ವಿಸರ್ಜನೆ ವೇಳೆ ಒಂದು ಟಾಪ್ ಮತ್ತು ಒಂದು ಬೇಸ್‌ಗೆ ಮಾತ್ರ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡ ಜಗದೀಶ ಚವಾಣ್ ಮಾತನಾಡಿ, ಚಿತ್ತಾಪುರದಲ್ಲಿ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಪ್ರತಿಯೊಂದು ಹಬ್ಬವನ್ನೂ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮದ ಭೇದಭಾವವಿಲ್ಲ. ಮುಂದೆಯೂ ಎಲ್ಲರೂ ಸೌಹಾರ್ದದಿಂದ ಹಬ್ಬ ಆಚರಿಸಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಹನುಮಂತ ಸಂಕನೂರ, ಬಾಬು ಕಾಶಿ, ಅಂಬರೀಶ್ ಸುಲೇಗಾಂವ್ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಪಿಐ ನಾಗರಾಜ, ಎಂ.ಎ. ರಶೀದ್, ಖಾಸಿಂ ಎ. ಟಿ.ಜಡ್., ಸಾಬಣ್ಣ ಕಾಶಿ, ಕೋಟೇಶ್ವರ ರೇಷ್ಮಿ, ನಾಗರಾಜ ರೇಷ್ಮಿ, ಆನಂದ ಯರಗಲ್, ದೇವು ಯಾಬಾಳ, ಲಕ್ಷ್ಮೀಕಾಂತ ತಾಂಡೂರಕರ್, ಸಚಿನ್, ಅಲ್ತಾಫ್, ಸೂರಜ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಮಹೇಶ್ ರೂಮಾಲ್ ನಿರೂಪಿಸಿ, ವಂದಿಸಿದರು.



