ಜಿಲ್ಲಾಸುದ್ದಿ

ಅಂತರ್ದೃಷ್ಟಿ ಸಮಾಜ ಮುನ್ನಡೆಸುವ ಚಿಂತನೆ: ಮಂಗಳಾ ಕಪರೆ

ಕಲಬುರಗಿ, ಸೆ.14: ಡಾ. ಶರಣಬಸವಪ್ಪ ಅಪ್ಪ ಅವರ ‘ಅಂತರ್ದೃಷ್ಟಿ’ ಎಂದರೆ ಕೇವಲ ಭವಿಷ್ಯವನ್ನು ಊಹಿಸುವ ದೃಷ್ಟಿಯಲ್ಲ. ಸಮಾಜದ ಅಗತ್ಯಗಳನ್ನು ಆಳವಾಗಿ ಗ್ರಹಿಸಿ, ಶಿಕ್ಷಣ, ಜ್ಞಾನ, ವಿಜ್ಞಾನ, ಸಂಸ್ಕೃತಿ, ಮಾನವೀಯತೆ ಹಾಗೂ ದಾಸೋಹದ ಮೂಲಕ ಸಮಾಜವನ್ನು ಹೇಗೆ ಮುನ್ನಡೆಸಬೇಕು ಎಂಬ ದೂರದೃಷ್ಟಿಯ ಚಿಂತನೆಯಾಗಿದೆ ಎಂದು ನಿವೃತ್ತ ಶಿಕ್ಷಕಿ ಮಂಗಳಾ ಕಪರೆ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪ ಹಾಗೂ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ‘ಡಾ. ಶರಣಬಸವಪ್ಪ ಅಪ್ಪ ಅವರ ಅಂತರ್ದೃಷ್ಟಿ’ ವಿಷಯ ಕುರಿತು ಅವರು ಮಾತನಾಡಿದರು.

ಡಾ. ಅಪ್ಪ ಅವರ ಅಂತರ್ದೃಷ್ಟಿಯ ಪ್ರಮುಖ ಕ್ಷೇತ್ರಗಳಲ್ಲಿ ಶಿಕ್ಷಣವೂ ಒಂದಾಗಿದೆ. ಶಿಕ್ಷಣವೆಂದರೆ ಕೇವಲ ಉದ್ಯೋಗ ಅಥವಾ ಪದವಿ ಪಡೆಯುವ ಸಾಧನವಲ್ಲ. ವ್ಯಕ್ತಿಯಲ್ಲಿ ಸ್ವತಂತ್ರ ಚಿಂತನೆ, ಮೌಲ್ಯಗಳು, ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸಬೇಕು ಎಂಬುದು ಅವರ ನಿಲುವಾಗಿತ್ತು ಎಂದು ಹೇಳಿದರು.

ಅವರ ಶೈಕ್ಷಣಿಕ ದೃಷ್ಟಿಯಲ್ಲಿ ಸ್ವತಂತ್ರವಾಗಿ ಆಲೋಚಿಸುವುದು, ಬರೆಯುವುದು, ಮಾತನಾಡುವುದು ಹಾಗೂ ಬದುಕುವುದು ಪ್ರಮುಖ ಅಂಶಗಳಾಗಿವೆ. ಶಿಕ್ಷಣದ ಮೂಲಕ ಜ್ಞಾನದ ಜ್ಯೋತಿ ಬೆಳಗಿಸುವುದರ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂಬ ಚಿಂತನೆ ಅವರ ಶೈಕ್ಷಣಿಕ ಕಾರ್ಯಗಳಲ್ಲಿ ಕಾಣುತ್ತದೆ ಎಂದರು.

ಡಾ. ಅಪ್ಪ ಅವರ ಅಂತರ್ದೃಷ್ಟಿಯ ವಿಶೇಷತೆ ಕಾಯಕ–ದಾಸೋಹವನ್ನು ಶಿಕ್ಷಣದೊಂದಿಗೆ ಸಂಯೋಜಿಸಿರುವುದು. ಕಲಿತ ಜ್ಞಾನವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೆ, ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು ಎಂಬ ಸಂದೇಶವನ್ನು ಅವರು ಸಾರಿದರು ಎಂದು ಮಂಗಳಾ ಕಪರೆ ತಿಳಿಸಿದರು.

ಪರಂಪರೆ ಹಾಗೂ ಆಧುನಿಕತೆಯ ಸಮನ್ವಯವೂ ಅವರ ಅಂತರ್ದೃಷ್ಟಿಯ ಮತ್ತೊಂದು ಪ್ರಮುಖ ಲಕ್ಷಣ. ಶರಣ ಸಂಸ್ಕೃತಿಯ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಆಧುನಿಕ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಮಾರ್ಗವನ್ನು ಅವರು ರೂಪಿಸಿದರು ಎಂದು ಹೇಳಿದರು.

‘ಜ್ಞಾನದಿಂದ ವ್ಯಕ್ತಿಯ ಬೆಳವಣಿಗೆ, ದಾಸೋಹದಿಂದ ಸಮಾಜದ ಬೆಳವಣಿಗೆ, ಮೌಲ್ಯಗಳಿಂದ ಮಾನವೀಯತೆಯ ಬೆಳವಣಿಗೆ ಹಾಗೂ ವಿಜ್ಞಾನದಿಂದ ಭವಿಷ್ಯದ ನಿರ್ಮಾಣ’ ಎಂಬುದು ಡಾ. ಅಪ್ಪ ಅವರ ಅಂತರ್ದೃಷ್ಟಿಯ ಸಾರವಾಗಿದೆ ಎಂದು ಮಂಗಳಾ ಕಪರೆ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button