ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹಿಸಿ ಅಮಲಾಪುರ ಗ್ರಾಮಸ್ಥರ ಧರಣಿ

ಬೀದರ್, ಸೆ. 9: ತಾಲ್ಲೂಕಿನ ಅಮಲಾಪುರ ಗ್ರಾಮದ ಸರ್ವೆ ನಂ. 71ರಲ್ಲಿರುವ ಸರ್ಕಾರಿ ಜಮೀನನ್ನು ಪರಿಶಿಷ್ಟ ಜಾತಿ (ಹೊಲೆಯ) ಸಮುದಾಯದ ಸ್ಮಶಾನ ಭೂಮಿಯಾಗಿ ಅಧಿಕೃತವಾಗಿ ಮಂಜೂರು ಮಾಡಿ, ಪಹಣಿ ಪತ್ರಿಕೆಯಲ್ಲಿ ಸ್ಮಶಾನ ಭೂಮಿ ಎಂದು ನಮೂದಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಮಲಾಪುರ ಗ್ರಾಮದ ಸರ್ವೆ ನಂ. 71ರ ಸರ್ಕಾರಿ ಜಮೀನಿನಲ್ಲಿ ಕಳೆದ 50–60 ವರ್ಷಗಳಿಂದ ಪರಿಶಿಷ್ಟ ಜಾತಿ (ಹೊಲೆಯ) ಸಮುದಾಯದವರು ಅಂತ್ಯಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇದುವರೆಗೆ ಈ ಜಮೀನು ಅಧಿಕೃತವಾಗಿ ಸ್ಮಶಾನಕ್ಕಾಗಿ ಮಂಜೂರಾಗಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಮಶಾನ ಭೂಮಿ ಮಂಜೂರು ಮಾಡುವಂತೆ 2011ರಿಂದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದೆ. ಆದರೂ ಇದುವರೆಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸ್ಮಶಾನ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಸ್ಥಳದ ವಾಸ್ತವ ಸ್ಥಿತಿಗತಿ ಕುರಿತು ವರದಿ ನೀಡುವಂತೆ ತಹಶೀಲ್ದಾರ್ ಸೂಚಿಸಿದ್ದ ಸಂದರ್ಭದಲ್ಲಿ, ಕಂದಾಯ ನಿರೀಕ್ಷಕ ರಾಜಕುಮಾರ ಬಾವಗಿ ಹಾಗೂ ವಿಷಯ ನಿರ್ವಾಹಕ ಅರುಣ ಸಿತಾಳಗೇರಾ ಅವರು ವಾಸ್ತವಾಂಶಕ್ಕೆ ವಿರುದ್ಧವಾಗಿ ತಪ್ಪು ಮಾಹಿತಿ ಒಳಗೊಂಡ ವರದಿ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳ ವಿಳಂಬ ಧೋರಣೆಯಿಂದ ಗ್ರಾಮಸ್ಥರ ನಡುವೆ ಗೊಂದಲ ಹಾಗೂ ಸಂಘರ್ಷಕ್ಕೆ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಅನುಮಾನವೂ ಗ್ರಾಮಸ್ಥರಲ್ಲಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೆ ನಂ. 71ರ ಜಮೀನನ್ನು ಕೂಡಲೇ ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನಕ್ಕಾಗಿ ಅಧಿಕೃತವಾಗಿ ಮಂಜೂರು ಮಾಡಿ, ಪಹಣಿ ಪತ್ರಿಕೆಯಲ್ಲಿ ಸ್ಮಶಾನ ಭೂಮಿ ಎಂದು ದಾಖಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಮ್ಮ ಬೇಡಿಕೆ ಈಡೇರುವವರೆಗೆ ನಿರಂತರ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಅಮಲಾಪುರ ಗ್ರಾಮಸ್ಥರು ಎಚ್ಚರಿಸಿದ್ದಾರೆ.



