ಶೋಷಣೆ, ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಅಭಯ ದಿವಾಕರ್

ಕಲಬುರಗಿ, ಸೆ. 8: ದೇಶದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಅಸಮಾನತೆ, ಶೋಷಣೆ ಹಾಗೂ ಜನವಿರೋಧಿ ನೀತಿಗಳು ಹೆಚ್ಚಾಗುತ್ತಿದ್ದು, ಇವುಗಳ ವಿರುದ್ಧ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಹೇಳಿದರು.
ಎಐಡಿಎಸ್‌ಒ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಶಿಬಿರದ ಎರಡನೇ ದಿನ ನಡೆದ ‘ವಿದ್ಯಾರ್ಥಿಗಳು ಮತ್ತು ರಾಜಕೀಯ’ ವಿಷಯದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇಶದ ಜಿಡಿಪಿ ಬೆಳೆಯುತ್ತಿದೆ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿವೆ. ಆದರೆ ದೇಶದ ಸಂಪತ್ತು ಯಾರ ಕೈ ಸೇರುತ್ತಿದೆ ಎಂಬುದು ಪ್ರಶ್ನಾರ್ಹವಾಗಿದೆ. ಒಂದು ಕಡೆ ಬಡವರು ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಶ್ರೀಮಂತರ ಆಸ್ತಿ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
2010ರಲ್ಲಿ ಸುಮಾರು ₹50 ಸಾವಿರ ಕೋಟಿ ಆಸ್ತಿ ಹೊಂದಿದ್ದ ಅದಾನಿ ಅವರ ಆಸ್ತಿ ಇಂದು ₹7 ಲಕ್ಷ ಕೋಟಿಗೂ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ₹1 ಲಕ್ಷ ಕೋಟಿ ಆಸ್ತಿ ಹೊಂದಿದ್ದ ಅಂಬಾನಿ ಅವರ ಆಸ್ತಿ ಸುಮಾರು ₹9 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ ಸಾಮಾನ್ಯ ಜನರ ಆಸ್ತಿ ಹಾಗೂ ಜೀವನಮಟ್ಟ ಕುಸಿಯುತ್ತಿದೆ ಎಂದು ಅವರು ಟೀಕಿಸಿದರು.
ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು, ಸಾಲದ ಸುಳಿಯಲ್ಲಿ ಸಿಲುಕಿರುವ ಬಡವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಕಾರಣವಾಗುತ್ತಿವೆ. ದೇಶದಲ್ಲಿರುವ ಕೋಟ್ಯಧಿಪತಿಗಳ ಆಸ್ತಿಗೆ ಶೇ.1ರಷ್ಟು ತೆರಿಗೆ ವಿಧಿಸಿದರೂ ವರ್ಷಕ್ಕೆ ಸುಮಾರು ₹80 ಸಾವಿರ ಕೋಟಿ ಸಂಗ್ರಹಿಸಬಹುದು. ಈ ಹಣದಿಂದ ಪ್ರತಿ ವರ್ಷ ಸಾವಿರಾರು ಸರ್ಕಾರಿ ಶಾಲೆಗಳು ಮತ್ತು ನೂರಾರು ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಬಹುದಾಗಿದೆ ಎಂದು ಅಭಯ ದಿವಾಕರ್ ಹೇಳಿದರು.
ದಿನಗೂಲಿ ₹100ಕ್ಕಾಗಿ ಬಡವರು ಹೋರಾಡಬೇಕಾದ ಪರಿಸ್ಥಿತಿ ಇದೆ. ಮತ್ತೊಂದೆಡೆ ಸಣ್ಣಪುಟ್ಟ ಕಾರ್ಖಾನೆಗಳು ಮುಚ್ಚುತ್ತಿದ್ದು, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಹಲವು ತಿಂಗಳಿಂದ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಸರ್ಕಾರದ ಜನವಿರೋಧಿ ನೀತಿಗಳ ಪರಿಣಾಮ ಶಾಲಾ ಕಟ್ಟಡಗಳೂ ಅಪಾಯದ ಸ್ಥಿತಿಯಲ್ಲಿವೆ. ಜನರ ಪರವಾಗಿದ್ದೇವೆ ಎಂದು ಹೇಳುವ ರಾಜಕಾರಣಿಗಳು ನಿಜವಾಗಿಯೂ ಜನರ ಪರವಾಗಿ ಕೆಲಸ ಮಾಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಬದಲಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಅವರು ಹೇಳಿದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಐಸಿಎಸ್ ಹುದ್ದೆಯನ್ನು ತೊರೆದು ಶೋಷಿತ ಜನರ ಪರವಾಗಿ ಹೋರಾಟ ನಡೆಸಿದರು. ಈಶ್ವರಚಂದ್ರ ವಿದ್ಯಾಸಾಗರ, ಜ್ಯೋತಿಬಾ ಫುಲೆ, ಖುದಿರಾಮ್ ಬೋಸ್, ಭಗತ್‌ಸಿಂಗ್ ಸೇರಿದಂತೆ ಅನೇಕ ಮಹನೀಯರು ತಮ್ಮ ವೈಯಕ್ತಿಕ ಬದುಕಿಗಿಂತ ಸಮಾಜದ ಸಂಕಷ್ಟದಲ್ಲಿದ್ದ ಜನರ ಪರವಾಗಿ ಬದುಕಿದರು. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿನ ಸರಿ-ತಪ್ಪು, ನ್ಯಾಯ-ಅನ್ಯಾಯಗಳನ್ನು ಗುರುತಿಸುವ ಜ್ಞಾನವನ್ನು ಬೆಳೆಸಿಕೊಂಡು, ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ನೈಜ ಮನುಷ್ಯರಾಗಬೇಕು ಎಂದು ಅವರು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಹಾಡು, ನಾಟಕ ಹಾಗೂ ನೃತ್ಯ ತರಬೇತಿ ನೀಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ತುಳಜಾರಾಮ್ ಎನ್.ಕೆ., ಕಾರ್ಯದರ್ಶಿ ವೆಂಕಟೇಶ್ ದೇವದುರ್ಗ, ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಾಳವಾರ್, ಜಿಲ್ಲಾ ಸಮಿತಿ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



