ಜಿಲ್ಲಾಸುದ್ದಿರಾಜ್ಯ

ಕಮಲಾಪುರದಲ್ಲಿ ಪ್ರಜಾ ಸೇವೆಗೆ ಚಾಲನೆ: ಜನರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಸರ್ಕಾರ

ಕಾಲಮಿತಿಯಲ್ಲಿ ಅಹವಾಲು ವಿಲೇವಾರಿ; ರೈತರ ಸಂಕಷ್ಟ ಪರಿಹಾರಕ್ಕೆ ಕ್ರಮದ ಭರವಸೆ

ಕಲಬುರಗಿ, ಸೆ.5: ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಮನೆ ಬಾಗಿಲಿನಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾ ಸೇವೆ ಅಭಿಯಾನ ಆರಂಭಿಸಿದೆ. ಇದು ಆಳುವ ಸರ್ಕಾರವಲ್ಲ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಸರ್ಕಾರ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಸೇವೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅದಕ್ಕಾಗಿ ಜನರ ಬಳಿಗೆ ಬಂದು ಅವರ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದರು.

ಹಿಂದೆ ಜನಸ್ಪಂದನ ಕಾರ್ಯಕ್ರಮದ ಮೂಲಕವೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಗುತ್ತಿತ್ತು. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರ ಅಹವಾಲುಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಪ್ರಜಾ ಸೇವೆಗಾಗಿ ಪ್ರತ್ಯೇಕ ಇಲಾಖೆಯನ್ನು ರೂಪಿಸಿದ್ದಾರೆ. ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದು, ಅವರ ನೋವು-ನಲಿವು ಹಾಗೂ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಈ ಅಭಿಯಾನ ಹೊಸ ರೂಪ ನೀಡಲಿದೆ ಎಂದು ಹೇಳಿದರು.

ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಸಲ್ಲಿಸುವ ಪ್ರತಿಯೊಂದು ಅರ್ಜಿಗೂ ಸ್ವೀಕೃತಿ ಸಂಖ್ಯೆ ನೀಡಲಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಅನ್ನ, ಅಕ್ಷರ, ಆರೋಗ್ಯ ಹಾಗೂ ಆವಿಷ್ಕಾರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕಳೆದ ವರ್ಷ ರಾಷ್ಟ್ರದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ₹653 ಕೋಟಿ ಬೆಳೆ ಪರಿಹಾರ ನೀಡಲಾಗಿದೆ. ಈ ವರ್ಷವೂ ಜಿಲ್ಲೆಯ ಸುಮಾರು 4.50 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಅರ್ಹ ರೈತರಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ಕಮಲಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬ ಬೇಡಿಕೆ ಕುರಿತು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕೇಂದ್ರದ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳು ಬರಪೀಡಿತ ಪ್ರದೇಶ ಘೋಷಣೆಗೆ ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ಮಿತಿಗಳನ್ನು ವಿಧಿಸಿವೆ. ಈ ನಿಯಮಗಳನ್ನು ಸರಳೀಕರಣಗೊಳಿಸಬೇಕೆಂಬುದು ರಾಜ್ಯ ಸರ್ಕಾರದ ಬಹುದಿನಗಳ ಬೇಡಿಕೆಯಾಗಿದೆ ಎಂದರು. ರೈತರ ಸಾಲ ಮನ್ನಾ ಕುರಿತು ಮಾತನಾಡಿದ ಅವರು, ಉದ್ಯಮಿಗಳಿಗೆ ಸಾಲ ಮನ್ನಾ ಮಾಡುವ ರೀತಿಯಲ್ಲಿಯೇ ರೈತರ ಸಾಲಕ್ಕೂ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಹಿಳೆಯ ಅಹವಾಲು ಆಲಿಸಿದ ಮುಖ್ಯಮಂತ್ರಿ

ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ್ಲಿಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಕಮಲಾಪುರದ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೇಖಮ್ಮ ಎಂಬ ಮಹಿಳೆ, ಮನೆ ನಿರ್ಮಾಣಕ್ಕೆ ಎರಡು ಕಂತಿನ ಹಣ ಬಂದಿದ್ದು, ಮೂರನೇ ಕಂತಿನ ಹಣ ಬಾಕಿಯಿದೆ. ಪತಿ ನಿಧನರಾಗಿದ್ದು, ಮಕ್ಕಳೂ ಇಲ್ಲದ ಕಾರಣ ಮನೆ ನಿರ್ಮಿಸಿಕೊಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಮೂಲಕ ನಿಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಶಾಸಕ ಬಸವರಾಜ ಮತ್ತಿಮೂಡ ಅವರು ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಕಮಲಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಮಾಡಿದರು.

40 ಇಲಾಖೆಗಳ ಮಳಿಗೆ

ಪ್ರಜಾ ಸೇವೆ ಅಭಿಯಾನದ ಅಂಗವಾಗಿ ಕಮಲಾಪುರ ತಾಲೂಕಿನ 19 ಗ್ರಾಮ ಪಂಚಾಯಿತಿಗಳು ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಟ್ಟಣ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್, ಎಸ್‌ಐಆರ್, ವಿಬಿ-ಜಿ-ರಾಮ್‌ಜಿ, ಭಾರತ್ ಜೋಡೋ ಯುವ ಸಂಘ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ, ಆಹಾರ, ಜೆಸ್ಕಾಂ, ಯುವನಿಧಿ ಹಾಗೂ ಸಹಕಾರ ಸೇರಿದಂತೆ ಒಟ್ಟು 40 ಪ್ರಮುಖ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಯಿತು.

ದೇಶಕ್ಕೆ ಮಾದರಿ ಪ್ರಜಾ ಸೇವೆ: ತಿಪ್ಪಣ್ಣಪ್ಪ ಕಮಕನೂರ

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ದೇಶದಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ರಾಜ್ಯ ಸರ್ಕಾರ ಪ್ರಜಾ ಸೇವೆ ಅಭಿಯಾನವನ್ನು ಕೈಗೊಂಡಿದೆ. ತಮ್ಮ ಕೆಲಸಗಳಿಗಾಗಿ ಜನರು ಸರ್ಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಅಥವಾ ವಿಧಾನಸೌಧಕ್ಕೆ ಅಲೆದಾಡಬಾರದು ಎಂಬ ಉದ್ದೇಶದಿಂದ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ. ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು.

₹5 ಲಕ್ಷದವರೆಗೆ ರೈತರ ಸಾಲ ಮನ್ನಾಗೆ ಮನವಿ

ಕಲಬುರಗಿ ಜಿಲ್ಲೆಯ ಎಲ್ಲಾ 11 ತಾಲೂಕುಗಳಲ್ಲಿಯೂ ಬರ ಪರಿಸ್ಥಿತಿ ಉಂಟಾಗಿದೆ. ಮಳೆಯ ಕೊರತೆಯಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಎರಡ್ಮೂರು ಬಾರಿ ಬಿತ್ತನೆ ಮಾಡಿದರೂ ಮಳೆ ಬಾರದ ಕಾರಣ ಬೆಳೆಗಳಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡುಬಂದಿಲ್ಲ. ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಜಿಲ್ಲೆಯ ಆರು ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಕಮಲಾಪುರ ಸೇರಿದಂತೆ ಬಾಕಿ ಇರುವ ಐದು ತಾಲೂಕುಗಳನ್ನೂ ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ರೈತರ ಬೆಳೆ ಸಾಲವನ್ನು ಗರಿಷ್ಠ ₹5 ಲಕ್ಷದವರೆಗೆ ಮನ್ನಾ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೆಮೂದ್ ಚಿಸ್ತಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಕಾಡಾ ಅಧ್ಯಕ್ಷ ಡಾ. ಅಬ್ದುಲ್ ರಶೀದ್, ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ, ಐಜಿಪಿ ಶಾಂತನು ಸಿನ್ಹಾ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರು, ಸಹಾಯಕ ಆಯುಕ್ತರಾದ ಸಾಹಿತ್ಯ ಅಲದಕಟ್ಟಿ, ಪ್ರಭು ರೆಡ್ಡಿ, ಕಮಲಾಪುರ ತಹಶೀಲ್ದಾರ್ ಮೊಹಮ್ಮದ್ ಮೋಹಸೀನ್ ಸೇರಿದಂತೆ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು.

Related Articles

Leave a Reply

Your email address will not be published. Required fields are marked *

Back to top button