ಜಿಲ್ಲಾಸುದ್ದಿ

ಬರ ಪ್ರದೇಶ ಘೋಷಣೆಗೆ 2 ದಿನ ಗಡುವು: ಸೆ.1ರಂದು ಜಿಲ್ಲಾಧಿಕಾರಿ ಕಚೇರಿಗೆ ಜೆಡಿಎಸ್ ಮುತ್ತಿಗೆ

ಬರಪೀಡಿತ ಜಿಲ್ಲೆ ಘೋಷಿಸಿ, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು: ರಾಜಕುಮಾರ್ ಬಡದಾಳ್

ಕಲಬುರಗಿ, ಆ.29: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ತಿಮ್ಮಾಪುರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ್ ಬಡದಾಳ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಸುಮಾರು 150 ರೈತರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಜಿಲ್ಲೆಯನ್ನು ಹಿಂದುಳಿದ ಪ್ರದೇಶವೆಂದು ಘೋಷಿಸಿ ಹಣದ ಪಟ್ಟಿ ಕಟ್ಟಿದರೂ ಇಲ್ಲಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ಪಾತಾಳಕ್ಕೆ ತಳ್ಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ತಿಂಗಳಿನಿಂದ ರೈತ ಸಂಘಟನೆಗಳ ಮೂಲಕ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಮನವಿ ಮಾಡುತ್ತಾ ಬಂದಿದ್ದೇವೆ. ಆದರೂ ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಒಬ್ಬ ರೈತನ ಕಣ್ಣಿಗೆ ಬೆಣ್ಣೆ, ಮತ್ತೊಬ್ಬ ರೈತನ ಕಣ್ಣಿಗೆ ಸುಣ್ಣ ಹಚ್ಚುವಂತಹ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಮೂವರು ಸಚಿವರು ಹಾಗೂ ಶಾಸಕರ ಬಾಯಿ ಮತ್ತು ಕಿವಿಗಳು ಬಂದ್ ಆಗಿವೆ ಎಂದು ಟೀಕಿಸಿದ ಅವರು, ರೈತರ ಸಮಸ್ಯೆಗಳನ್ನು ಆಲಿಸುವ ಮತ್ತು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ ಜಿಲ್ಲಾಡಳಿತ ಹಾಗೂ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಬೇಕು. ಈಗಾಗಲೇ ರೈತರು ಬೆಳೆ ವಿಮೆಯಲ್ಲಿಯೂ ತಾರತಮ್ಯ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಕಣ್ಣು ತೆರೆದು ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಆದರೆ ಅಧಿಕಾರಿಗಳು ರೈತರ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ ಎಂದು ಅವರು ದೂರಿದರು.

ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಕಾಲಾವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಹಾಗೂ ಬೆಳೆ ವಿಮೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆಪ್ಟೆಂಬರ್ 1ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ಖಚಿತ ಎಂದು ರಾಜಕುಮಾರ್ ಬಡದಾಳ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನೀಲ್ ಹೊಸಮನಿ, ನಾಗಣ್ಣ ವಾರದ್, ಸಂಜು ಮಡಕಿ, ನಾಗಯ್ಯಸ್ವಾಮಿ ಹೆಬ್ಬಾಳ್, ಮಹಾದೇವಿ ಪೂಜಾರಿ, ಬೈಲಪ್ಪ ಪಟ್ಟೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button