ರಾಜಕೀಯ

ಬೆಳೆ ವಿಮೆ ಕನ್ನಡಿಯೊಳಗಿನ ಗಂಟಾಗುತ್ತಿದೆ: ಆಗಸ್ಟ್ 25ಕ್ಕೆ ಕಮಲಾಪುರದಲ್ಲಿ ಜೆಡಿಎಸ್ ಪ್ರತಿಭಟನೆ

ಬೆಳೆ ವಿಮೆ ಮಂಜೂರು, ಸಿಸಿಎ ವರದಿ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಜೆಡಿಎಸ್‌ನಿಂದ ಹೋರಾಟ

ಕಲಬುರಗಿ, ಆ.22: ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಮಂಜೂರು ಮಾಡುವಲ್ಲಿ ವಿಳಂಬ, ಬೆಳೆ ಇಳುವರಿ ಪ್ರಮಾಣ ನಿಗದಿ (ಸಿಸಿಎ) ವರದಿ ಹಾಗೂ ವಿಮಾ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ಆಗಸ್ಟ್ 25ರಂದು ಕಮಲಾಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್–ಜುಲೈ ತಿಂಗಳಲ್ಲಿ ಬೆಳೆ ವಿಮೆ ಮಾಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡುತ್ತಿದ್ದರು. ಆದರೆ, ಇದೀಗ ರೈತರ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆ ವಿಮೆಗೆ ರೈತರ ನೋಂದಣಿ ಮಾಡಿಸುವ ಆಸಕ್ತಿ ತೋರದಿರುವ ಡಿಸಿ, ಜಂಟಿ ಕೃಷಿ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಬೆಳೆ ಇಳುವರಿ ಪ್ರಮಾಣ ನಿಗದಿ (ಸಿಸಿಎ) ವರದಿಯನ್ನು ಸಮರ್ಪಕವಾಗಿ ದಾಖಲಿಸಿ ವಿಮೆ ಮಂಜೂರು ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

2025–26ನೇ ಸಾಲಿನಲ್ಲಿ ಯಾವ ಗ್ರಾಮಕ್ಕೆ ಎಷ್ಟು ಪ್ರಮಾಣದಲ್ಲಿ ಬೆಳೆ ವಿಮೆ ಮಂಜೂರಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಡಿಸಿ, ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಸಾಂಖ್ಯಿಕ ಇಲಾಖಾಧಿಕಾರಿಗಳನ್ನು ಕಳೆದ 15 ದಿನಗಳಿಂದ ಸಂಪರ್ಕಿಸಿದರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಹಾಕಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಬಸವರಾಜ ಬಿರಬಿಟ್ಟಿ ಟೀಕಿಸಿದರು.

ರೈತರಿಂದ ನೂರಾರು ಕೋಟಿ ರೂಪಾಯಿ ಬೆಳೆ ವಿಮೆ ಪ್ರೀಮಿಯಂ ಸಂಗ್ರಹಿಸುವ ವಿಮಾ ಕಂಪನಿಯ ಕಚೇರಿಯೇ ಕಲಬುರಗಿಯಲ್ಲಿ ಇಲ್ಲ. ಹೀಗಾಗಿ ಬೆಳೆ ವಿಮೆ ರೈತರಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ. ಬೆಳೆ ವಿಮೆ ಮಂಜೂರು ಹಾಗೂ ಪರಿಹಾರ ಬಿಡುಗಡೆ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದರೂ ಉಸ್ತುವಾರಿ ಸಚಿವರು ಹಾಗೂ ಶಾಸಕರು ನ್ಯಾಯ ಕೊಡಿಸಲು ಮುಂದಾಗದಿರುವುದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಳೆದ ಸಾಲಿನ ಬೆಳೆ ವಿಮೆ ಮಂಜೂರಾತಿಯಲ್ಲಿ ಕಂಡುಬಂದ ತಾರತಮ್ಯ ಇದೀಗ ಮುಗಿದ ಅಧ್ಯಾಯ ಎಂದು ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಮತ್ತೊಂದೆಡೆ ವಿಮಾ ಕಂಪನಿಗಳು ಬ್ರಿಟಿಷರ ಕಾಲದ ನೀತಿಯನ್ನು ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಆಗಸ್ಟ್ 25ರಂದು ಕಮಲಾಪುರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಜಾಧವ್ ಮಾತನಾಡಿ, ಆಗಸ್ಟ್ 25ರಂದು ಕಮಲಾಪುರದಲ್ಲಿ ಗ್ರಾಮೀಣ ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಎರಡನೇ ಕಂತಿನ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಕಮಲಾಪುರದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಂಗಾಧರ ಪಂಚಾಳ್, ಸಂಜೀವ ಮಹರೆ, ಮಲ್ಲಿಕಾರ್ಜುನ ಸಂಗಾಣಿ, ನಾಗಣ್ಣ ವಾರದ, ಮಹಾಂತಪ್ಪ ಮದರಿ, ಹಣಮಯ್ಯ ಗುತೇದಾರ್, ನಾಗೇಶ ಹೆಬ್ಬಾಳ, ಶಿವಲಿಂಗಪ್ಪ ಪಾಟೀಲ, ಖಾಜಾ ಪಟೇಲ್, ಚಂದ್ರಕಾಂತ ಮೋರೆ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button