ಬಿಜೆಪಿ ಅಧ್ಯಕ್ಷ ಚಂದು ಪಾಟೀಲರಿಗೆ ವೈಯಕ್ತಿಕ ನಿಂದನೆ: ಕಾನೂನು ಕ್ರಮಕ್ಕೆ ಸಿದ್ಧ: ಕಲ್ಲೂರ್
ಅಭಿವೃದ್ಧಿ ವೈಫಲ್ಯಗಳ ಬಗ್ಗೆ ಪ್ರಶ್ನಿಸಿದರೆ ವೈಯಕ್ತಿಕ ನಿಂದನೆ ಸರಿಯೇ? ಎಂದು ಕಾಂಗ್ರೆಸ್‌ಗೆ ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಪ್ರಶ್ನೆ

ಕಲಬುರಗಿ, ಆ.22: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ವಿಫಲವಾಗಿದ್ದು, ಹದಗೆಟ್ಟ ರಸ್ತೆಗಳು, ಗುಂಡಿಗಳ ಸಮಸ್ಯೆ, ಜಿಲ್ಲಾಡಳಿತದ ಕಾರ್ಯವೈಖರಿ ಹಾಗೂ ಸೂಪರ್ ಮಾರ್ಕೆಟ್‌ನಲ್ಲಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುರಿತು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ್ದರು. ಈ ವೇಳೆ ಆಡಳಿತದಲ್ಲಿರುವ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ನಾಯಕರು ವೈಯಕ್ತಿಕ ನಿಂದನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ನಗರ ಒಬಿಸಿ ಘಟಕದ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಪ್ರಶ್ನಿಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಬೇಕು. ಸಮಸ್ಯೆಗಳ ಕುರಿತು ವಿರೋಧ ಪಕ್ಷದವರು ಪ್ರಶ್ನೆ ಕೇಳಬಾರದು ಎಂದಾದರೆ ಅಧಿಕಾರ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಸರಗಳ್ಳತನ, ಅಕ್ರಮ ಗಾಂಜಾ ಮಾರಾಟ, ಮಟ್ಕಾ ದಂಧೆ, ಅಕ್ರಮ ಮರಳು ಸಾಗಾಟ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದವರು ಯಾರು? ಅವರು ವಿರೋಧ ಪಕ್ಷದವರೇ ಅಥವಾ ಸರ್ಕಾರದಲ್ಲಿರುವವರೇ ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಅಭಿವೃದ್ಧಿ ಕಾಮಗಾರಿಗಳ ಬದಲಾಗಿ ಜನರಿಂದ ಹಣ ಲೂಟಿ, ಸರ್ಕಾರದ ವೈಫಲ್ಯ, ಸಚಿವರ ಕಾರ್ಯಕ್ಷಮತೆ, ಉದ್ಯೋಗ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಸುರಕ್ಷತೆ ಸೇರಿದಂತೆ ಹಲವು ಜನಪರ ಸಮಸ್ಯೆಗಳಿಗೆ ಪರಿಹಾರ ಕೇಳಿದರೆ, ವಿರೋಧ ಪಕ್ಷದ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಆಡಳಿತದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ. ಆದರೆ ಇಂತಹ ಕೆಲಸಕ್ಕೆ ಆಡಳಿತ ಪಕ್ಷದವರೇ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ತಮ್ಮ ವೈಫಲ್ಯಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಕೊಡಿ; ನಾವು ಉತ್ತಮ ಆಡಳಿತ ನೀಡುತ್ತೇವೆ. ನಮ್ಮ ಆಡಳಿತದಲ್ಲಿ ವೈಫಲ್ಯ ಕಂಡುಬಂದರೆ ನೀವು ಖಂಡಿತ ಆರೋಪ ಮಾಡಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲರು ವಿರೋಧ ಪಕ್ಷದ ಮುಖಂಡರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮಾಡಿರುವ ಆರೋಪಗಳು ಸುಳ್ಳಾಗಿದ್ದರೆ ಕಾಂಗ್ರೆಸ್ ನಾಯಕರು ಅದಕ್ಕೆ ಸೂಕ್ತ ಉತ್ತರ ನೀಡಬೇಕು. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ಹೇಳಿದರು.
ಚಂದು ಪಾಟೀಲರ ವಿರುದ್ಧ ವೈಯಕ್ತಿಕ ನಿಂದನೆ ಮುಂದುವರಿಸಿದರೆ, ಅಂತಹವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಕುರಿತು ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.



