ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿ ಮಾಲಾ ಕಣ್ಣಿ ಅಖಾಡಕ್ಕೆ?
ನವೆಂಬರ್‌ನಲ್ಲಿ ಚುನಾವಣೆ ಸಾಧ್ಯತೆ; ಹಾಲಿ ಹಾಗೂ ಮಾಜಿ ಅಧ್ಯಕ್ಷರ ನಡುವೆ ಪೈಪೋಟಿ ತೀವ್ರ — ಮಹಿಳಾ ನಾಯಕತ್ವಕ್ಕೆ ಸಾಹಿತ್ಯ ವಲಯದಲ್ಲಿ ಒತ್ತಾಯ

ಕಲಬುರಗಿ, ಆ.20: ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಇದೇ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ಆಕಾಂಕ್ಷಿಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಬಾರಿ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. ಹಾಲಿ ಹಾಗೂ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಮಂದಿ ಮತ್ತೆ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇರುವ ನಡುವೆಯೇ, ಸಮಾಜಮುಖಿ ಹಾಗೂ ಜನಪರ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಮಾಲಾ ಕಣ್ಣಿ ಅವರು ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲ ಸಾಹಿತ್ಯ ವಲಯದಲ್ಲಿ ಮೂಡಿದೆ.
ಸದ್ಯದ ಮಾಹಿತಿಯಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಮತ್ತೊಮ್ಮೆ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಚುನಾವಣಾ ಕಣಕ್ಕೆ ಧುಮುಕುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿ.ಎಚ್. ನಿರಗುಡಿ ಹಾಗೂ ವಿಶ್ವನಾಥ ಭಕ್ರೆ ಅವರು ಕೂಡ ಸೋಲಿನ ಬಳಿಕವೂ ತಮ್ಮ ಗೆಲುವಿನ ವಿಶ್ವಾಸದೊಂದಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಮತ್ತೊಮ್ಮೆ ಸ್ಪರ್ಧಿಸುವ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಮ್ಮ ಬೆಂಬಲಿಗರ ಮುಂದೆ ತಿಳಿಸಿದ್ದಾರೆ. ಆದರೆ, ಅವರ ಬೆಂಬಲಿಗ ದೌಲತರಾಯ ಪಾಟೀಲ ಅವರು ಚುನಾವಣಾ ಕಣಕ್ಕೆ ಧುಮುಕಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ವಿಶ್ವನಾಥ ಭಕ್ರೆ ಅವರು ಈಗಾಗಲೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಲಿ ಅಧ್ಯಕ್ಷರ ಅವಧಿಯಲ್ಲಿನ ವೈಫಲ್ಯಗಳನ್ನು ಮುಂದಿಟ್ಟುಕೊಂಡು ತಮ್ಮ ಚುನಾವಣಾ ತಂತ್ರ ರೂಪಿಸುತ್ತಿರುವ ಅವರು, ವೀರಭದ್ರ ಸಿಂಪಿ ಅವರ ಬೆಂಬಲಿಗ ದೌಲತರಾಯ ಪಾಟೀಲ ಅವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ದೌಲತರಾಯ ಪಾಟೀಲ ಅವರು ಭಕ್ರೆ ಅವರಿಗೆ ಯಾವುದೇ ಅಧಿಕೃತ ಬೆಂಬಲದ ಭರವಸೆ ನೀಡಿಲ್ಲ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಬಿ.ಎಚ್. ನಿರಗುಡಿ ಅವರು ತೀವ್ರ ಪೈಪೋಟಿ ನೀಡಿದ್ದರೂ, ಮತದಾನದ ಸಂದರ್ಭದಲ್ಲಿ ಅವರ ಕೆಲವು ಮುಂಚೂಣಿ ಬೆಂಬಲಿಗರು ವಿರೋಧಿ ಬಣಕ್ಕೆ ಬೆಂಬಲ ನೀಡಿದ್ದರಿಂದ ಸೋಲು ಅನುಭವಿಸಿದ್ದರು. ಸೋಲಿನ ಬಳಿಕವೂ ಕನ್ನಡದ ಕೆಲಸಗಳಲ್ಲಿ ಸಕ್ರಿಯರಾಗಿರುವ ನಿರಗುಡಿ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಾರಿ ಅವರು ಮತ್ತೆ ಸ್ಪರ್ಧಿಸಿದರೆ, ವಿರೋಧಿ ಅಭ್ಯರ್ಥಿಗಳಿಗೆ ಪೈಪೋಟಿ ಕಠಿಣವಾಗುವ ಸಾಧ್ಯತೆ ಇದೆ.
ಮಹಿಳಾ ಅಭ್ಯರ್ಥಿಯಾಗಿ ಮಾಲಾ ಕಣ್ಣಿ?
ಇವೆಲ್ಲದರ ನಡುವೆ ಸಮಾಜಮುಖಿ ಹಾಗೂ ಜನಪರ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಮಾಲಾ ಕಣ್ಣಿ ಅವರ ಹೆಸರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೇಳಿಬರುತ್ತಿದೆ. ಅವರ ಆಪ್ತರು ಹಾಗೂ ಬೆಂಬಲಿಗರ ವಲಯದಲ್ಲಿ ಮಾಲಾ ಕಣ್ಣಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ್ ಬಡಿಗೇರ್ ಅವರು ಮಾಲಾ ಕಣ್ಣಿ ಅವರ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ, ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಬೇಕು ಎಂಬ ಆಶಯವನ್ನು ಬಹಿರಂಗಪಡಿಸಿದ್ದರು. ಸುರೇಶ್ ಬಡಿಗೇರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ದೀರ್ಘಕಾಲದ ನಂಟಿದ್ದು, ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಆಯ್ಕೆಯಾಗಲು ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾತುಗಳು ಅವರ ಬೆಂಬಲಿಗರಿಂದ ಕೇಳಿಬರುತ್ತಿವೆ.
ಸುರೇಶ್ ಬಡಿಗೇರ್ ಅವರು ಸಂಘಟನಾ ಕ್ಷೇತ್ರದಲ್ಲಿ ಪ್ರಗತಿಪರ ಮನೋಭಾವದವರಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬೆಂಬಲ ಮಾಲಾ ಕಣ್ಣಿ ಅವರಿಗೆ ದೊರೆತರೆ, ಚುನಾವಣಾ ಕಣ ಮತ್ತಷ್ಟು ಕುತೂಹಲ ಮೂಡಿಸುವ ಸಾಧ್ಯತೆ ಇದೆ.
ಕಲಬುರಗಿಯಂತಹ ಸಾಮಾಜಿಕ ಸುಧಾರಣೆಯ ನೆಲದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಇದುವರೆಗೆ ಮಹಿಳಾ ಅಧ್ಯಕ್ಷರ ಅವಕಾಶ ದೊರೆತಿಲ್ಲ. ಇದುವರೆಗೆ ತವಗ ಭೀಮಸೇನರಾವ್, ಪಿ. ಮಲ್ಲಾಪುರ, ಶಿವಶರಣ ಪಾಟೀಲ ಜಾವಳಿ, ಬಿ. ಮಹಾದೇವಪ್ಪ, ಲಕ್ಷ್ಮಣರಾವ್ ಗೋವಿ, ಅಪ್ಪಾರಾವ್ ಅಕ್ಕೋಣಿ, ಪಿ.ಎಂ. ಮಣ್ಣೂರ, ವೀರಭದ್ರ ಸಿಂಪಿ, ಡಾ. ಎಂ.ಎಸ್. ಪಾಟೀಲ, ಮಹಿಪಾಲರೆಡ್ಡಿ ಮುನೂರು ಸೇರಿದಂತೆ ಹಲವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಹಿಂದೆ ಪಿ.ಎಂ. ಮಣ್ಣೂರ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಅವರ ಅವಧಿಯ ಚುನಾವಣೆಯಲ್ಲಿ ಹಿರಿಯ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಹಾಗೂ ಖ್ಯಾತ ಜ್ಯೋತಿಷಿ ಗುರುರಾಜ ಉಜ್ಜಯಿನಿ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರು. ಆ ಸಂದರ್ಭದಲ್ಲಿ ಸರಸ್ವತಿ ಚಿಮ್ಮಲಗಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅಂತಿಮವಾಗಿ ಪಿ.ಎಂ. ಮಣ್ಣೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸರಸ್ವತಿ ಚಿಮ್ಮಲಗಿ ಅವರು ನಂತರ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಜಿಲ್ಲೆಯಲ್ಲಿ ಪ್ರತಿಭಾವಂತ ಹಾಗೂ ಖ್ಯಾತ ಮಹಿಳಾ ಸಾಹಿತಿಗಳ ಕೊರತೆ ಇಲ್ಲದಿದ್ದರೂ, ಈವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಮಹಿಳೆಯೊಬ್ಬರಿಗೆ ದೊರೆತಿಲ್ಲ. ಹೀಗಾಗಿ ಈ ಬಾರಿ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯವೂ ಸಾಹಿತ್ಯ ವಲಯದಲ್ಲಿ ಬಲವಾಗುತ್ತಿದೆ.
ಮಾಲಾ ಕಣ್ಣಿ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಮಹಿಳಾ ಶಕ್ತಿಯನ್ನು ಒಗ್ಗೂಡಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಅವರು, ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಮಹಿಳಾ ನಾಯಕತ್ವಕ್ಕೆ ಹೊಸ ದಿಕ್ಕು ನೀಡಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ಇನ್ನು ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅವರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅವರು ಕಳೆದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಮತ್ತೊಮ್ಮೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಅವರ ಆಪ್ತರಿಂದ ಕೇಳಿಬರುತ್ತಿದೆ.
ಒಟ್ಟಾರೆ, ನವೆಂಬರ್‌ನಲ್ಲಿ ನಡೆಯಲಿರುವ ಸಾಧ್ಯತೆಯಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಾಲಿ-ಮಾಜಿ ಅಧ್ಯಕ್ಷರ ಪೈಪೋಟಿಯ ನಡುವೆ ಮಹಿಳಾ ಅಭ್ಯರ್ಥಿಯಾಗಿ ಮಾಲಾ ಕಣ್ಣಿ ಅವರು ಕಣಕ್ಕಿಳಿಯುತ್ತಾರೆಯೇ ಎಂಬುದು ಇದೀಗ ಪ್ರಮುಖ ಕುತೂಹಲದ ಪ್ರಶ್ನೆಯಾಗಿದೆ.



