ಮದ್ಯದ ಬಾಟಲಿಗಳು, ಮಾನಿನಿಯ ಹಾಡು ಹಾಡಿದ ಮಾಶಾಳ ಸ್ವಾಮಿ ವಿಡಿಯೊ ವೈರಲ್..!
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್; ಸಾರ್ವಜನಿಕರಿಂದ ತೀವ್ರ ಟೀಕೆ ಮತ್ತು ಆಕ್ರೋಶ

ಅಫಜಲಪುರ, ಆ.18: ಪ್ರಖರ ಹಿಂದುತ್ವವಾದಿ ಎಂದು ಗುರುತಿಸಿಕೊಂಡು, ಉದ್ರೇಕಕಾರಿ ಭಾಷಣದ ಮೂಲಕ ವಿವಾದಕ್ಕೆ ಒಳಗಾಗಿದ್ದ ಪ್ರಮೋದ್ ಮುತಾಲಿಕ್ ಸ್ಥಾಪಿತ ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ತಾಲೂಕಿನ ಮಾಶಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮಿ ಅವರು ಮದ್ಯದ ಬಾಟಲಿಗಳ ನಡುವೆ ‘ಮಾನಿನಿ’ ಕುರಿತಾದ ಸಿನಿಮಾದ ಹಾಡು ಹಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಕಾವಿಧಾರಿ ಸ್ವಾಮೀಜಿಯವರು ಕೈಯಲ್ಲಿ ಮೈಕ್ ಹಿಡಿದು ಜನಪ್ರಿಯ ‘ಯಾರಿವಳು ಯಾರಿವಳು’ ಎಂಬ ಸಿನಿಮಾ ಗೀತೆಯನ್ನು ಹಾಡುತ್ತಿರುವುದು ಕಂಡುಬಂದಿದೆ. ಅವರ ಎದುರು ಮದ್ಯದ ಬಾಟಲಿಗಳಂತೆ ಕಾಣುವ ವಸ್ತುಗಳು ಇರುವುದು ಕೂಡ ವಿಡಿಯೊದಲ್ಲಿ ಗೋಚರಿಸುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರಾವಣ ಮಾಸದ ಆರಂಭದಲ್ಲೇ ಸ್ವಾಮೀಜಿಯವರು ಸಿನಿಮಾ ಹಾಡು ಹಾಡುತ್ತಿರುವ ವಿಡಿಯೊ ವೈರಲ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸ್ವಾಮೀಜಿಯವರು ಈ ಹಿಂದೆ, “ಹಿಂದು ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ಖಡ್ಗ ಕೊಡಿ” ಎಂಬ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಇದೀಗ ಸಿನಿಮಾ ಹಾಡು ಹಾಡುತ್ತಿರುವ ವಿಡಿಯೊ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿದೆ.
ಈ ನಡುವೆ ಮಾಶಾಳ ಗ್ರಾಮದ ಗಣ್ಯರಾದ ಶಿವು ಪಾಟೀಲ್ ಅವರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿಯವರು ಕೂಡಲೇ ಮಠ ತೊರೆದು ಮನೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.
ವಿಡಿಯೊದ ಸತ್ಯಾಸತ್ಯತೆ, ಅದರ ಸಂದರ್ಭ ಹಾಗೂ ವಿಡಿಯೊದಲ್ಲಿ ಕಾಣುವ ವಸ್ತುಗಳ ಕುರಿತು ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ.



