ಜಿಲ್ಲಾಸುದ್ದಿ

ಕಾರ್ಮಿಕರ ಕಲ್ಯಾಣಕ್ಕಾಗಿ ನಿರಂತರ ಹೋರಾಟದ ಫಲ: ಶಂಕರ ಕಟ್ಟಿಸಂಗಾವಿ

ಚೌಡಾಪುರದಲ್ಲಿ ಕಟ್ಟಡ ಕಾರ್ಮಿಕರ ಗ್ರಾಮ ಘಟಕ ಹಾಗೂ ಸಂಘಟನಾ ನಾಮಫಲಕ ಉದ್ಘಾಟನೆ

ಅಫಜಲಪುರ: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ (ರಿ), ಬೆಂಗಳೂರು ಇದರ ಗ್ರಾಮ ಘಟಕ ಚೌಡಾಪುರ ಹಾಗೂ ತಾಲೂಕು ಸಮಿತಿ ಅಫಜಲಪುರದ ವತಿಯಿಂದ ಗ್ರಾಮ ಘಟಕ ಮತ್ತು ಸಂಘಟನಾ ನಾಮಫಲಕ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಘದ ರಾಜ್ಯಾಧ್ಯಕ್ಷ ಎನ್.ಪಿ. ಸಾಮಿ ಹಾಗೂ ಅವರ ಒಡನಾಡಿಗಳು 1982ರಿಂದ 2006ರವರೆಗೆ ನಿರಂತರ ಹೋರಾಟ ನಡೆಸಿದ್ದಾರೆ. ಅವರ ಸತತ ಹೋರಾಟ ಹಾಗೂ ಸಂಘಟಿತ ಪ್ರಯತ್ನಗಳ ಫಲವಾಗಿ ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಗೆ ಬರಲು ಸಾಧ್ಯವಾಯಿತು ಎಂದು ಹೇಳಿದರು.

ಕಲ್ಯಾಣ ಮಂಡಳಿಯ ಮೂಲಕ ಕಟ್ಟಡ ಕಾರ್ಮಿಕರಿಗೆ ವಿವಿಧ ಕಲ್ಯಾಣ ಸೌಲಭ್ಯಗಳು ದೊರೆಯುತ್ತಿವೆ. ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡು ದೊರೆಯುವ 12 ವಿವಿಧ ಕಲ್ಯಾಣ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸರ್ಕಾರದ ಯೋಜನೆಗಳು ಹಾಗೂ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಪ್ರತಿಯೊಬ್ಬ ಕಾರ್ಮಿಕರಿಗೂ ಮಾಹಿತಿ ತಲುಪಿಸುವುದು ಸಂಘದ ಪ್ರಮುಖ ಜವಾಬ್ದಾರಿಯಾಗಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಅವರ ಕುಟುಂಬಗಳ ಭವಿಷ್ಯದ ಭದ್ರತೆಗಾಗಿ ಎಲ್ಲರೂ ಸಂಘಟಿತರಾಗಿ ಸಂಘದೊಂದಿಗೆ ಕೈಜೋಡಿಸಿ ಮುನ್ನಡೆಯಬೇಕು ಎಂದು ಶಂಕರ ಕಟ್ಟಿಸಂಗಾವಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತಿಮ್ಮಣ್ಣ ದೇವಕರ್, ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಮಾಜಿ ಗ್ರಾಪಂ ಸದಸ್ಯ ಶರಣಪ್ಪ ಕಲಕೇರಿ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಮಲ್ಲು ಮಂಜಳಕರ್ ಅವರು ಮಾಲಾರ್ಪಣೆ ಮಾಡಿದರು.

ಸಂಘಟನಾ ನಾಮಫಲಕವನ್ನು ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ ಹಾಗೂ ಜಿಲ್ಲಾಧ್ಯಕ್ಷ ಮೋಸಿನ ಪಟೇಲ್ ಉದ್ಘಾಟಿಸಿದರು. ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಮಾಜಿ ಗ್ರಾಪಂ ಸದಸ್ಯ ತಿಮ್ಮಣ್ಣ ಆಲಕುಂಟೆ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷಣ ಮಂಜಳಕರ್ ವಹಿಸಿದ್ದರು. ಯಲ್ಲಪ್ಪ ಕುರಾಡೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ದತ್ತು ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಸುಂಬುಡ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕಲ್ಲೂರ, ದಶರಥ ಡೂಗನಕರ್, ಮಾಜಿ ಗ್ರಾಪಂ ಸದಸ್ಯ ತೇಜು ಕುಸಳಕರ್ ಹಾಗೂ ಶಿವಶಂಕರ ಶ್ರೀನಿವಾಸ ಸರಡಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು. ಸಂಘಟನೆಯನ್ನು ಬಲಪಡಿಸುವುದು, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಕುರಿತು ಕಾರ್ಯಕ್ರಮದಲ್ಲಿ ವಿಶೇಷವಾಗಿ ಒತ್ತು ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button