ರಾಜಕೀಯ

ಬರ ಘೋಷಿಸಿ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ: ಬಿಜೆಪಿ ರೈತ ಮೋರ್ಚಾ ಆಗ್ರಹ

ಮುಂಗಾರು ವೈಫಲ್ಯದಿಂದ ಬೆಳೆ ನಷ್ಟ; ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು, ಉದ್ದು, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಒಣಗಿ ಹೋಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಬರ ಘೋಷಣೆ ಮಾಡಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ರಮೇಶ್ ಬೊಮ್ಮನಹಳ್ಳಿ ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತರು ಸಾಲ ಮಾಡಿ ರಸಗೊಬ್ಬರ ಹಾಗೂ ಬೀಜ ಖರೀದಿಸಿ ಬಿತ್ತನೆ ನಡೆಸಿದ್ದರೂ ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೀಡಾಗಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಅನಾವೃಷ್ಟಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ನಿರಂತರ ಎರಡು ವರ್ಷಗಳಿಂದ ಪ್ರಕೃತಿ ವೈಪರೀತ್ಯ ಎದುರಿಸುತ್ತಿರುವ ರೈತರು ಆರ್ಥಿಕವಾಗಿ ಕುಸಿದಿದ್ದು, ಮೇವು ಕೊರತೆಯಿಂದ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಾಗರಾಜ್ ಹೂಗಾರ, ಮಲ್ಲಿಕಾರ್ಜುನ ಇಟಗಿ, ಆನಂದ ಪಾಟೀಲ ನರಬೋಳಿ, ದೀಪಕ್ ಹೊನ್ನೂರಕರ, ಶಿವರಾಮ ಚವ್ಹಾಣ, ಪ್ರಭು ಗಂಗಾಣಿ, ದಶರಥ ದೊಡ್ಡಮನಿ, ಆಕಾಶ್, ಸಂಗಮೇಶ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button