ಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ
ಕ್ಷೇತ್ರ ಮರುವಿಂಗಡಣೆಗೆ ಕಾದಿರಿಸದೆ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಅಭಿಯಾನ

ಮಹಿಳಾ ಮೀಸಲಾತಿ ಜಾರಿಗೆ ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿಯ ಷರತ್ತುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮಹಿಳಾ ಮೀಸಲಾತಿಗಾಗಿ ರಾಷ್ಟ್ರೀಯ ಮೈತ್ರಿ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ರಾಜ್ಯ ಸಲಹೆಗಾರರಾದ ಪದ್ಮಿನಿ ಕಿರಣಗಿ, ಜಯಶ್ರೀ, ಪದ್ಮಾವತಿ ಪಾಟೀಲ, ವಿದ್ಯಾಶ್ರೀ, ಫಾತಿಮಾ ಶೇಖ್, ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಶಾಂತಾ ಘಂಟೆ, ಜಿಲ್ಲಾ ಅಧ್ಯಕ್ಷೆ ಗೌರವಮ್ಮ ಪಾಟೀಲ, ಎಸ್ಎಫ್ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್, ಸುಜಾತಾ ಸರ್ವೇಶ್, ಇಮಾಮಸಾಬ್, ಮಲ್ಲಮ್ಮ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
2023ರಲ್ಲಿ ಅಂಗೀಕರಿಸಲಾದ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆ ಮಹಿಳೆಯರಿಗೆ ರಾಜಕೀಯ ಪ್ರತಿನಿಧಿತ್ವ ನೀಡುವ ಐತಿಹಾಸಿಕ ಹೆಜ್ಜೆಯಾಗಿದ್ದರೂ, ಅದರ ಜಾರಿಯನ್ನು ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಗೆ ಕಟ್ಟಿ ಹಾಕಿರುವುದು ಮಹಿಳೆಯರಿಗೆ ನ್ಯಾಯ ದೊರೆಯುವುದನ್ನು ಮತ್ತಷ್ಟು ವಿಳಂಬಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
1996ರಲ್ಲಿ ಮಂಡನೆಯಾದ ಮೂಲ ಮಹಿಳಾ ಮೀಸಲಾತಿ ಮಸೂದೆಯಲ್ಲಿಯೂ, 2010ರಲ್ಲಿ ರಾಜ್ಯಸಭೆ ಅಂಗೀಕರಿಸಿದ್ದ ಮಸೂದೆಯಲ್ಲಿಯೂ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಷರತ್ತುಗಳಿರಲಿಲ್ಲ. ಈಗ ಅವುಗಳನ್ನು ಸೇರಿಸಿರುವುದು ಮಹಿಳಾ ಮೀಸಲಾತಿ ಜಾರಿಗೆ ಅನಗತ್ಯ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ಸಮಾಜದ ವಿವಿಧ ಕ್ಷೇತ್ರಗಳ ಸಾವಿರಾರು ನಾಗರಿಕರು ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದು, ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ತಕ್ಷಣವೇ ಅಗತ್ಯ ಸಂವಿಧಾನ ತಿದ್ದುಪಡಿ ಮಾಡಿ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಷರತ್ತುಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೀಸಲಾತಿ ಜಾರಿಯು ಕೇವಲ ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಯಲ್ಲ; ಅದು ಸಂವಿಧಾನಾತ್ಮಕ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.



