ಕುಲಕುಂದಿಯಲ್ಲಿ ಡಾ. ಕೋಟ ಶಿವರಾಮ ಕಾರಂತರ ಬದುಕು-ಬರಹ ಅರಿವು ಕಾರ್ಯಕ್ರಮ ಯಶಸ್ವಿ
ಕಸಾಪ ನಾಲವಾರ ವಲಯ ಘಟಕದಿಂದ ಅರ್ಥಪೂರ್ಣ ಸಾಹಿತ್ಯ ಕಾರ್ಯಕ್ರಮ; ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಾರಂತರ ಸಾಹಿತ್ಯ ಸಾಧನೆ ಕುರಿತು ಉಪನ್ಯಾಸ

ಚಿತ್ತಾಪುರ, ಆ.6: ತಾಲ್ಲೂಕಿನ ಕುಲಕುಂದಿ ಗ್ರಾಮದ ವೀರೇಶ್ವರ ದೇವಸ್ಥಾನದ ಆವರಣದಲ್ಲಿ ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬದುಕು, ಬರಹ ಹಾಗೂ ಸಾಹಿತ್ಯದ ಅರಿವು ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಶಿವಕುಮಾರ್ ಸುಣಗಾರ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಚಿತ್ತಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಖ್ಯಾತ ಸಾಹಿತಿ ನರಸಪ್ಪ ಚಿನ್ನಾಕಟ್ಟಿ ಅವರು ಡಾ. ಕೋಟ ಶಿವರಾಮ ಕಾರಂತರ ಜೀವನ, ಸಾಹಿತ್ಯ ಹಾಗೂ ಸಮಾಜಮುಖಿ ಸಾಧನೆಗಳ ಕುರಿತು ಸಮಗ್ರವಾಗಿ ಉಪನ್ಯಾಸ ನೀಡಿದರು.
“ಕರಾವಳಿಯ ಭಾರ್ಗವ” ಎಂದೇ ಪ್ರಸಿದ್ಧರಾಗಿರುವ ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 1978ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸಾಹಿತ್ಯದ ಜೊತೆಗೆ ವಿಜ್ಞಾನ, ಕಲೆ, ಯಕ್ಷಗಾನ, ಪರಿಸರ ಸಂರಕ್ಷಣೆ ಹಾಗೂ ಸಮಾಜ ಸುಧಾರಣೆಯ ಕ್ಷೇತ್ರಗಳಲ್ಲಿಯೂ ಅವರು ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಕಾರಂತರ ಜನನ (1902ರ ಅಕ್ಟೋಬರ್ 10ರಂದು ಉಡುಪಿ ಜಿಲ್ಲೆಯ ಕೋಟ), ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಹಾಗೂ ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಔಡಣ, ಹುಚ್ಚು ಮನಸ್ಸಿನ ಹತ್ತು ಮುಖಗಳು ಸೇರಿದಂತೆ ಪ್ರಮುಖ ಕೃತಿಗಳ ಕುರಿತು ಅವರು ವಿವರಿಸಿದರು. ಮಕ್ಕಳಿಗಾಗಿ ವಿಜ್ಞಾನ ಮತ್ತು ಕಲೆಯ ಕುರಿತ ವಿಶ್ವಕೋಶಗಳನ್ನು ರಚಿಸಿರುವುದು, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ ಅದನ್ನು ಉಳಿಸಿ ಬೆಳೆಸಿದ ಸಾಧನೆ ಹಾಗೂ ಪರಿಸರ ಸಂರಕ್ಷಣೆಯಲ್ಲಿನ ಅವರ ಬದ್ಧತೆಯನ್ನು ಅವರು ಸ್ಮರಿಸಿದರು.
ಗೌರವ ಸಲಹೆಗಾರ ಶಿವಕುಮಾರ್ ಸುಣಗಾರ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ದೇಶ ಸಮೃದ್ಧಿಯತ್ತ ಸಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಅರಿವು ಬೆಳೆಸುವ ಇಂತಹ ಕಾರ್ಯಕ್ರಮಗಳು ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ನಾಲವಾರ ವಲಯ ಘಟಕದ ಕಸಾಪ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದನೀಯ. ಸರ್ಕಾರಿ ಶಾಲಾ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಮಲ್ಲುಗೌಡ ಪೋ. ಪಾಟೀಲ್, ಸಿದ್ದುಗೌಡ, ನಾಗು ಸಾಹುಕಾರ್, ಮಲ್ಲೇಶಿ ಪೂಜಾರಿ, ಈರಣ್ಣ ಪೂಜಾರಿ, ಸಾಯಿಬಣ್ಣ ವನಬಾ, ಮಹಾದೇವ ಮಡಿವಾಳ, ಹಯ್ಯಾಳ ಪೂಜಾರಿ, ಮೌನೇಶ ಸರ್, ಈರಣ್ಣ ನೀಲೂರ, ಸತೀಶ ಮೇಂಬರ, ವೀರೇಶ ಹಡಪದ (ಎಸ್‌ಡಿಎಂಸಿ ಅಧ್ಯಕ್ಷರು), ಬಸ್ಸುಕಾರಿ, ರವಿ ಮಠದ, ಶ್ರೀಧರ ಪತ್ತಾರ, ದೇವರಾಜ್ ಪೂಜಾರಿ, ಶರಣು ಸಾಹು ಮದರಕಿ, ಉಮೇಶ ಯರಗೋಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತಗಾರ ಶಂಕರ ಹಡಪದ ಹಾಗೂ ತಬಲಾ ವಾದಕ ಮೌನೇಶ ಶಹಾಪೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಶಾಂತ ಕುಲಕರ್ಣಿ, ರಶ್ಮಿ ಕುಲಕರ್ಣಿ ಮತ್ತು ಶಿವಲೀಲಾ ತುನ್ನೂರ ಅವರು ಕವನ ವಾಚನ ಮಾಡಿದರು.
ನಾಲವಾರ ವಲಯ ಘಟಕದ ಕಸಾಪ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್) ಸ್ವಾಗತಿಸಿದರು. ಅರುಣಕುಮಾರ ಸುಣಗಾರ ಕಾರ್ಯಕ್ರಮ ನಿರೂಪಿಸಿದರೆ, ಕಸಾಪ ಪ.ಪಂ. ಪ್ರತಿನಿಧಿ ಮಲ್ಲಿಕಾರ್ಜುನ ತಳವಾರ (ಸುಗೂರ ಎನ್) ವಂದನಾರ್ಪಣೆ ಸಲ್ಲಿಸಿದರು.
ಕುಲಕುಂದಿ ಗ್ರಾಮದ ನೂರಾರು ಕನ್ನಡಾಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



