ಜಿಲ್ಲಾಸುದ್ದಿ

ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ-ಶ್ರೀನಿವಾಸ ನವಲೆ

ಕಲಬುರಗಿ,ಸೆ.10-ಒಂದು ಕುಟುಂಬದಲ್ಲಿ ಹುಟ್ಟಿ, ಬೆಳೆದು, ಆ ಕುಟುಂಬಕ್ಕೆ ಆಸರೆಯಾಗಬೇಕಾದವರು ಈ ಜೀವನ ಬೇಡ, ಬದುಕು ಬೇಡ ಅಂತ ಹೇಳಿ ಆತ್ಮಹತ್ಯೆ ಮಾಡಿಕೊಂಡರೆ ಆ ಕುಟುಂಬಕ್ಕೆ ಆಗುವಂತಹ ನಷ್ಟ ಭರಿಸಲಾಗದ್ದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹೊರತು ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರವಲ್ಲ, ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.

ಗುರುವಾರ ಕಲಬುರಗಿ ನಗರದ ಆದರ್ಶ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆತ್ಮಹತ್ಯೆಯ ಕುರಿತಾದ ದೃಷ್ಟಿಕೋನವನ್ನು ಬದಲಾಯಿಸುವುದು: ಸಂಭಾಷಣೆಯನ್ನು ಪ್ರಾರಂಭಿಸಿ ಎಂಬ ಈ ವರ್ಷದ ಘೋಷ್ಯವಾಕ್ಯದೊಂದಿದೆ ಆಯೋಜಿಸಿದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಕುರಿತು ಅರಿವಿನ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಅವಾಲು ಎದುರಿಸಬೇಕಾದ ಯುವ ಶಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಆತಂಕಕಾರಿ ವಿಷಯ. ಆತ್ಮಹತ್ಯೆ ಅಂದರೆ ನಮ್ಮನ್ನು ನಾವೇ ಕೊಂದುಕೊಳ್ಳುವುದು. ಅಂದರೆ ಸಾವನ್ನು ನಾವೇ ತಂದುಕೊಳ್ಳುವುದಾಗಿದೆ‌ ಎಂದರು.

ಆತ್ಮಹತ್ಯೆಯ ‘ಪ್ರಯತ್ನ’ ಇದೆಯಲ್ಲ, ಅದು ಹಿಂದೆ ಅಪರಾಧವಾಗಿತ್ತು. ಉದೀಗ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದರೆ ಅವನು ತೀವ್ರ ಮಾನಸಿಕ ಒತ್ತಡ ಅಥವಾ ಖಿನ್ನತೆಯಲ್ಲಿದ್ದಾನೆ ಎಂದರ್ಥ. ಹೀಗಾಗಿ ‘ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ- 2017ಅಡಿಯಲ್ಲಿ ಆತ್ಮಹತ್ಯೆ ಯತ್ನವನ್ನು ಅಪರಾಧ ಮುಕ್ತಗೊಳಿಸುವ ಪ್ರಯತ್ನ ಮಾಡಲಾಗಿದೆ. ಚಾಲ್ತಿಯಲ್ಲಿರುವ ನಿಯಮದಂತೆ, ಆತ್ಮಹತ್ಯೆಗೆ ಯತ್ನಿಸಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕುವಂತಿಲ್ಲ. ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಕೌನ್ಸಿಲಿಂಗ್ ಹಾಗೂ ಸೂಕ್ತ ವೈದ್ಯಕೀಯ/ಮಾನಸಿಕ ಚಿಕಿತ್ಸೆ ಕೊಡಿಸಬೇಕು ಮತ್ತುಚಗುಣಮುಖರಾದ ಮೇಲೆ ಮನೆಗೆ ಕಳುಹಿಸಬೇಕು ಎಂದರು.

ಕೆಲವರು ಯಾವುದೇ ಮಾನಸಿಕ ತೊಂದರೆ ಇಲ್ಲದಿದ್ದರೂ ಅಧಿಕಾರಿಗಳನ್ನು, ಶಿಕ್ಷಕರನ್ನು ಅಥವಾ ಪೋಷಕರನ್ನು ಬೆದರಿಸಲು ಆತ್ಮಹತ್ಯೆಯ ನಾಟಕ ಆಡುತ್ತಾರೆ. ಉದಾಹರಣೆಗೆ, ಅಟೆಂಡೆನ್ಸ್ ಕಮ್ಮಿಯಿದೆ ಎಂದು ಹಾಲ್ ಟಿಕೆಟ್ ಕೊಡದಿದ್ದಾಗ ‘ನಾನು ವಿಷ ಕುಡಿಯುತ್ತೇನೆ’ ಎಂದು ಬೆದರಿಸುವುದು. ಇಂತಹ ಸಂದರ್ಭಗಳಲ್ಲಿ, ಅಂದರೆ ಬೇರೆಯವರನ್ನು ಹೆದರಿಸಲು ಅಥವಾ ದುರುದ್ದೇಶಕ್ಕೆ ಆತ್ಮಹತ್ಯೆ ಯತ್ನದ ನಾಟಕ ಆಡಿದರೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಅನ್ವಯಿಸುತ್ತದೆ ಎಂದು ಶ್ರೀನಿವಾಸ ನವಲೆ ಅವರು, ಇಂದಿನ ಧಾವಂತದ ಜೀವನಶೈಲಿಯಲ್ಲಿ ಒತ್ತಡ, ಆತಂಕ, ಸೋಲಿನ ಭಯ ಹೆಚ್ಚಾಗಿದೆ ಇದಕ್ಕೆಲ್ಲ ಕಾರಣವಾಗಿದ್ದು, ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಯಾರಾದರು ಮಾನಸಿಕ ಒತ್ತಡ ಅಥವಾ ತೊಂದರೆಗಳಿದ್ದರೆ ಕೌನ್ಸಿಲಿಂಗ್ ಪಡೆಯಬಹುದು. ಮನಸ್ಸಿನ ನೋವನ್ನು ಒಳಗೆ ಇಟ್ಟುಕೊಳ್ಳದೆ ಹಂಚಿಕೊಳ್ಳಿ. ಜೀವನ ಎಂದರೆ ಕೇವಲ ಸುಖವಲ್ಲ, ಕಷ್ಟ-ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಸಾಧನೆಯತ್ತ ಹೆಜ್ಜೆ ಹಾಕುವುದಾಗಿದೆ ಎಂದು ಹೇಳಿದರು.

ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ರವಿಕಾಂತಿ ಕ್ಯಾತನಾಳ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಕಷ್ಟಪಟ್ಟು ವ್ಯಾಸಂಗ ಮಾಡಬೇಕು. ಅಂಕಗಳಿಗಿಂತ ಕಲಿಕೆ ಮತ್ತು ಶ್ರಮ ಮುಖ್ಯ. ಪರೀಕ್ಷೆ ಅಥವಾ ಅಂಕಗಳ ಕುಸಿತದಿಂದ ಕಂಗಾಲಾಗದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ; ಪ್ರತಿಯೊಂದು ಸಮಸ್ಯೆಗೆ ಸೂಕ್ತ ಪರಿಹಾರವಿದ್ದೇ ಇರುತ್ತದೆ.

ಖಿನ್ನತೆ ಅಥವಾ ಮಾನಸಿಕ ಒತ್ತಡ ಉಂಟಾದಾಗ ಪೋಷಕರು, ಶಿಕ್ಷಕರು ಅಥವಾ ಆಪ್ತರೊಂದಿಗೆ ಮುಕ್ತವಾಗಿ ಸಂವಾದ ನಡೆಸಬೇಕು. ಸಹಾಯಕ್ಕಾಗಿ ‘14416/1800-89-14416 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಧನಾತ್ಮಕ ಆಲೋಚನೆ, ಯೋಗ, ಧ್ಯಾನ ಹಾಗೂ ದೈಹಿಕ ವ್ಯಾಯಾಮಗಳ ಮೂಲಕ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕಲಬುರಗಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ಉಪನಿರ್ದೇಶಕ ದೇವನಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಸಣ್ಣ-ಸಣ್ಣ ವಿಚಾರಗಳಿಗೆ ಧೃತಿಗೆಡದೆ ಧನಾತ್ಮಕ ಚಿಂತನೆ ಹಾಗೂ ಗಟ್ಟಿ ಮನಸ್ಸಿನಿಂದ ಜೀವನವನ್ನು ಎದುರಿಸಬೇಕು.
ಕೇವಲ ಪರೀಕ್ಷೆಯ ಅಂಕಗಳಷ್ಟೇ ಜೀವನವಲ್ಲ. ಅಬ್ದುಲ್ ಕಲಾಮ್ ಹಾಗೂ ಮಹಾತ್ಮ ಗಾಂಧೀಜಿಯವರಂತಹ ಮಹಾನ್ ನಾಯಕರ ಸರಳತೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಮೊಬೈಲ್, ಸಮಾಜಿಕ ಜಾಲತಾಣದ ಗೀಳಿನಿಂದ ಹಿರಬಂದು ಶೈಕ್ಷಣಿಕ ಪ್ರಗತಿಯತ್ತ ಗಮನ ಹರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಆತ್ಮಹತ್ಯೆ ತಡೆಗೆ ಮುಕ್ತ ಮಾತುಕತೆ ಅಗತ್ಯ

ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಭುಕಿರಣ್ ಮಾತನಾಡಿ, ಸಣ್ಣಪುಟ್ಟ ಪರೀಕ್ಷಾ ಭಯ, ಪ್ರೇಮ ವೈಫಲ್ಯ ಹಾಗೂ ದುರಭ್ಯಾಸಗಳಿಗೆ ಒಳಗಾಗಿ ಯುವಜನತೆ ಆತ್ಮಹತ್ಯೆಯಂತಹ ತೀವ್ರ ಕಠೀರ ನಿರ್ಧಾರಗಳಿಗೆ ಶರಣಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಜಾಗತಿಕವಾಗಿ 15 ರಿಂದ 29 ವರ್ಷದ ಯುವಜನತೆಯಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಮುಕ್ತ ಮಾತುಕತೆ (Start the Conversation) ಒಂದೇ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದರು.

ಮಾನಸಿಕ ಒತ್ತಡ ಅನುಭವಿಸುತ್ತಿರುವಾಗ ಅದನ್ನು ಮನಸ್ಸಿನಲ್ಲೇ ಮುಚ್ಚಿಡದೆ ಕುಟುಂಬಸ್ಥರು, ಸ್ನೇಹಿತರು, ಶಿಕ್ಷಕರು ಅಥವಾ ಮಾನಸಿಕ ವೈದ್ಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಸಮಸ್ಯೆ ತೀವ್ರಗೊಂಡು ಹಂತ ಮೀರುವ ಮುನ್ನವೇ ನೆರವು ಪಡೆಯುವುದು ಅಗತ್ಯ. ಸರ್ಕಾರವು ಉಚಿತ ಮಾನಸಿಕ ಆರೋಗ್ಯ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆಪ್ತಸಮಾಲೋಚನೆ ಸೇವೆಯನ್ನು ಒದಗಿಸಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈಧ್ಯ ಡಾ. ಮಹಮ್ಮದ್ ಇರಫಾನ ಮಹಾಗಾವಿ ಅವರು ಸವಿಸ್ತಾರವಾಗಿ ಪಿಪಿಟಿ ಮೂಲಕ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ‌ ಶ್ರೀನಿವಾಸ ನವಲೆ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.

ಕಾಲೇಜಿನ ಪ್ರಾಂಶುಪಾಲ ರಾಜು ಗಂಗಾಧರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಗಣಿತ ಉಪನ್ಯಾಸಕ ನರಸಪ್ಪ ರಂಗೋಲಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ವಿಠ್ಠಲ ಭಾವಿಮನಿ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕ ಶಿವಕುಮಾರ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button