ಸುಸ್ತಿ ಸಾಲದ ಬಡ್ಡಿ ದರ ಪುನರ್‌ನಿಗದಿ ಯೋಜನೆಯಡಿ ಪರಿಗಣಿಸಿ
ನಾರಂಜಾ ಸಕ್ಕರೆ ಕಾರ್ಖಾನೆಗೆ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯ

ಬೀದರ್, ಸೆ.19: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಡ್ಡಿ ಮನ್ನಾ ಮಾಡಿ, ಅಸಲು ಸಾಲದ ಮೊತ್ತವನ್ನು ಮರುಪಾವತಿಸಲು ಏಕಕಾಲಿಕ ಸಾಲ ತಿರುವಳಿ (OTS) ಅವಕಾಶ ಕಲ್ಪಿಸಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.
ಈ ಕುರಿತು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಮನವಿ ಸಲ್ಲಿಸಿರುವ ಅವರು, ಅಪೆಕ್ಸ್ ಬ್ಯಾಂಕ್‌ನ ಸುಸ್ತಿ ಸಾಲದ ಬಡ್ಡಿ ದರ ಪುನರ್‌ನಿಗದಿ ಯೋಜನೆಯಡಿ ತಾಲ್ಲೂಕಿನ ಬರೂರ್ ಗ್ರಾಮದ ಬಳಿಯ ಭವಾನಿ ಸಕ್ಕರೆ ಕಾರ್ಖಾನೆಯ ಬಡ್ಡಿ ಮನ್ನಾ ಮಾಡಿ ಸಾಲದ ಹೊರೆಯಿಂದ ಮುಕ್ತಗೊಳಿಸಿರುವುದನ್ನು ಉಲ್ಲೇಖಿಸಿದ್ದಾರೆ.
ಇದೇ ಮಾದರಿಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನೂ ಸುಸ್ತಿ ಸಾಲದ ಬಡ್ಡಿ ದರ ಪುನರ್‌ನಿಗದಿ ಯೋಜನೆಯಡಿ ಪರಿಗಣಿಸಿ, ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬ್ಯಾಂಕ್ ಸಾಲ ಪಡೆದು ಮರುಪಾವತಿ ಮಾಡಲಾಗದೆ ಎನ್‌ಪಿಎ (ಅನುತ್ಪಾದಕ ಆಸ್ತಿ) ಬಾಕಿ ಹೊಂದಿರುವ ಸಂಸ್ಥೆಗಳಿಗೆ ಸಾಲದ ಹೊರೆಯಿಂದ ಮುಕ್ತವಾಗಲು ಅವಕಾಶ ಕಲ್ಪಿಸಲಾಗಿದೆ. ನಾರಂಜಾ ಕಾರ್ಖಾನೆಯೂ ಎನ್‌ಪಿಎ ಸಾಲಗಾರನಾಗಿರುವುದರಿಂದ ಏಕಕಾಲಿಕ ಸಾಲ ತಿರುವಳಿ ಮೂಲಕ ಸಾಲ ಇತ್ಯರ್ಥಪಡಿಸಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.
ಅಪೆಕ್ಸ್ ಬ್ಯಾಂಕ್‌ನ ಯೋಜನೆಯಡಿ ಕೆಟ್ಟ, ಅನುಮಾನಾಸ್ಪದ ಅಥವಾ ನಷ್ಟದ ಸಾಲವೆಂದು ವರ್ಗೀಕರಿಸಿರುವ ಪ್ರಕರಣಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ. ಸಾಲಕ್ಕೆ ಭದ್ರತೆಯಾಗಿ ಇಡಲಾಗಿರುವ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕಾನೂನು ತೊಡಕು ಉಂಟಾಗಿ, ಸಾಲ ವಸೂಲಾತಿಗಾಗಿ ದೀರ್ಘಕಾಲದಿಂದ ಕಾನೂನು ಹೋರಾಟ ನಡೆಯುತ್ತಿರುವ ಪ್ರಕರಣಗಳಿಗೂ ಯೋಜನೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.
₹668 ಕೋಟಿ ಸಾಲದ ಹೊರೆ
ಕಾರ್ಖಾನೆ ಆರಂಭಿಕ ಹಂತದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ₹57.90 ಕೋಟಿ ಸಾಲ ಪಡೆದಿತ್ತು. ನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಸಾಲದ ಮೊತ್ತ ₹668 ಕೋಟಿಗೆ ಏರಿಕೆಯಾಗಿದೆ. ಸದ್ಯ ಕಾರ್ಖಾನೆ ನಿರಂತರ ನಷ್ಟದಲ್ಲಿದ್ದು, ಕಬ್ಬಿಗೆ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆ ಪಾವತಿಸಿದ್ದರಿಂದ ₹288 ಕೋಟಿ ನಷ್ಟವಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಹೆಚ್ಚಿನ ಸಕ್ಕರೆ ವಿತರಣೆ ಹಾಗೂ ಯಂತ್ರೋಪಕರಣಗಳ ಸವಕಳಿಯಿಂದಲೂ ನಷ್ಟದ ಪ್ರಮಾಣ ಹೆಚ್ಚಾಗಿದೆ. ಡಿಸಿಸಿ ಬ್ಯಾಂಕ್‌ನಿಂದ ಪಡೆದ ₹57.90 ಕೋಟಿ ಸಾಲದ ಮೇಲಿನ ಬಡ್ಡಿ ದಾಮ್‌ದುಪ್ಪಟ್ಟಾಗಿರುವುದರಿಂದ ಸಾಲ ಅನುತ್ಪಾದಕ ಆಸ್ತಿಯಾಗಿ ಪರಿಗಣಿಸಲ್ಪಟ್ಟಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಕಾರ್ಖಾನೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳನ್ನು ನಿಗದಿತ ಅವಧಿಯಲ್ಲಿ ಪಾವತಿಸುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದ ನೆರವು ಅಗತ್ಯ
ನಷ್ಟದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಸಾಲಕ್ಕೆ ಖಾತರಿ ನೀಡಿ ಆರ್ಥಿಕ ನೆರವು ಒದಗಿಸಿರುವ ಹಲವು ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ.
ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಬೈಲಹೊಂಗಲದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆಯ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ, ಬೆಳಗಾವಿಯ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸರ್ಕಾರದ ನೆರವು ಪಡೆದಿವೆ ಎಂದು ಅವರು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಸೋಮೇಶ್ವರ ಫಾರ್ಮರ್ಸ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್ ಸಂಸ್ಥೆಯ ಮನವಿಯ ಮೇರೆಗೆ ರಾಜ್ಯ ಸರ್ಕಾರ ಬಡ್ಡಿ ದಾಮ್‌ದುಪ್ಪಟ್ಟಾಗಿರುವುದನ್ನು ಗಮನಿಸಿ, ಏಕಕಾಲಿಕ ಸಾಲ ತಿರುವಳಿ ಮೂಲಕ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಸಹಕಾರಿ ಕ್ಷೇತ್ರದ ಪುನಶ್ಚೇತನಕ್ಕೆ ಕ್ರಮ ಅಗತ್ಯ
ನಷ್ಟದಲ್ಲಿರುವ ಸಹಕಾರಿ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ, ಋಣಮುಕ್ತಗೊಳಿಸಲು ಪಂಜಾಬ್, ಪಶ್ಚಿಮ ಬಂಗಾಳ, ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೆರವು ನೀಡಲಾಗಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ಹಲವು ತಿದ್ದುಪಡಿಗಳನ್ನು ಮಾಡಿದ್ದಾರೆ. ಎನ್‌ಸಿಡಿಸಿ ಮೂಲಕ ನೇರವಾಗಿ ಸಾಲ ಪಡೆಯಲು ಅನುಕೂಲವಾಗುವಂತೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ.
ಸಹಕಾರಿ ಸಕ್ಕರೆ ವಲಯ ಗ್ರಾಮೀಣ ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿದ್ದು, ಕಬ್ಬು ಬೆಳೆಗಾರರಿಗೆ ಖಚಿತ ಮಾರುಕಟ್ಟೆ ಒದಗಿಸುವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೂ ಇದು ಬೆಂಬಲವಾಗಿದೆ.
ಈ ಹಿನ್ನೆಲೆಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಡಿಸಿಸಿ ಬ್ಯಾಂಕ್ ಸಾಲದ ಮೇಲಿನ ದಾಮ್‌ದುಪ್ಪಟ್ಟಾದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿ, ಅಸಲು ಸಾಲದ ಮೊತ್ತಕ್ಕೆ ಏಕಕಾಲಿಕ ಸಾಲ ತಿರುವಳಿ ಯೋಜನೆಯಡಿ ಅವಕಾಶ ಕಲ್ಪಿಸಬೇಕು. ಇದರಿಂದ ರೈತರು, ಬ್ಯಾಂಕ್ ಹಾಗೂ ಕಾರ್ಖಾನೆಯ ಸಿಬ್ಬಂದಿಯ ಹಿತ ರಕ್ಷಿಸಬಹುದಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.



