ಸಿಕ್ಕ ಐಫೋನ್‌ನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಶಿವಲಿಂಗಪ್ಪ
ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ; ಕಳೆದುಹೋದ ವಸ್ತುಗಳನ್ನು ಸಮೀಪದ ಠಾಣೆಗೆ ಒಪ್ಪಿಸುವಂತೆ ಪೊಲೀಸರ ಮನವಿ

ಕಲಬುರಗಿ, ಆ. 3: ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಲಿಂಗಪ್ಪ ಎಂಬುವವರು ರಸ್ತೆಯಲ್ಲಿ ಸಿಕ್ಕಿದ್ದ ಐಫೋನ್ ಮೊಬೈಲ್‌ನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಪ್ರಾಮಾಣಿಕತೆ ಮೆರೆದು ಚಿಂಚೋಳಿ ಪೊಲೀಸ್ ಠಾಣೆಗೆ ಒಪ್ಪಿಸಿ ಮಾದರಿಯಾಗಿದ್ದಾರೆ.
ಮೊಬೈಲ್‌ನ್ನು ಸ್ವೀಕರಿಸಿದ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಅದರ ನೈಜ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ಕೈಗೊಂಡಿದ್ದಾರೆ. ಶಿವಲಿಂಗಪ್ಪ ಅವರ ಪ್ರಾಮಾಣಿಕ ನಡವಳಿಕೆಯನ್ನು ಮೆಚ್ಚಿದ ಪೊಲೀಸ್ ಅಧಿಕಾರಿಗಳು ಅವರನ್ನು ಅಭಿನಂದಿಸಿ ಗೌರವಿಸಿದರು.
ಸಮಾಜದಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿಗಳ ನಡೆ ಇತರರಿಗೂ ಮಾದರಿಯಾಗಬೇಕು. ಸಾರ್ವಜನಿಕರು ಕಳೆದುಹೋದ ವಸ್ತುಗಳು ಸಿಕ್ಕಲ್ಲಿ ಅವುಗಳನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ನೈಜ ಮಾಲೀಕರಿಗೆ ತಲುಪಿಸಲು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಶಿವಲಿಂಗಪ್ಪ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಪ್ರಾಮಾಣಿಕತೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದೆ.



