ಕಲಬುರಗಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ: 28,657 ಅಭ್ಯರ್ಥಿಗಳ ಹಾಜರಾತಿ
40 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ; ಜಿಲ್ಲಾಧಿಕಾರಿ ಇಕ್ರಂ ಶರೀಫ್, ಪೊಲೀಸ್ ಆಯುಕ್ತರಿಂದ ಪರಿಶೀಲನೆ

ಕಲಬುರಗಿ, ಆ.2: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಭಾನುವಾರ ಕಲಬುರಗಿ ನಗರದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಜಿಲ್ಲೆಯಾದ್ಯಂತ ಸುಗಮ ಹಾಗೂ ಶಾಂತಿಯುತವಾಗಿ ನೆರವೇರಿತು.
ಪರೀಕ್ಷೆಯ ವ್ಯವಸ್ಥೆ ಮತ್ತು ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಅವರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಯ ಪ್ರಗತಿ, ಅಭ್ಯರ್ಥಿಗಳಿಗೆ ಕಲ್ಪಿಸಿದ್ದ ಸೌಲಭ್ಯಗಳು ಹಾಗೂ ಅಕ್ರಮ ತಡೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.
ನಗರದ 40 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಸಲಾಯಿತು. ಬೆಳಗಿನ ಅವಧಿಯಲ್ಲಿ ನೋಂದಾಯಿಸಿದ್ದ 15,702 ಅಭ್ಯರ್ಥಿಗಳ ಪೈಕಿ 14,942 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 760 ಮಂದಿ ಗೈರಾಗಿದ್ದರು. ಮಧ್ಯಾಹ್ನದ ಅವಧಿಯಲ್ಲಿ ನೋಂದಾಯಿಸಿದ್ದ 14,370 ಅಭ್ಯರ್ಥಿಗಳ ಪೈಕಿ 13,715 ಮಂದಿ ಪರೀಕ್ಷೆ ಬರೆದರೆ, 655 ಅಭ್ಯರ್ಥಿಗಳು ಗೈರಾಗಿದ್ದರು. ಒಟ್ಟಾರೆ 30,072 ನೋಂದಾಯಿತ ಅಭ್ಯರ್ಥಿಗಳಲ್ಲಿ 28,657 ಮಂದಿ ಪರೀಕ್ಷೆಗೆ ಹಾಜರಾಗಿ, 1,415 ಮಂದಿ ಗೈರಾದರು.
ಪರೀಕ್ಷೆಯ ಪಾರದರ್ಶಕತೆ ಮತ್ತು ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ಅಭ್ಯರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಪೊಲೀಸ್ ಸಿಬ್ಬಂದಿಯಿಂದ ಫ್ರಿಸ್ಕಿಂಗ್ ನಡೆಸಲಾಯಿತು. ಜೊತೆಗೆ ಸ್ಮಾರ್ಟ್ ಡಿವೈಸ್ ಬಳಕೆ ತಡೆಯಲು ಇಎನ್ಟಿ ತಜ್ಞ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ತಪಾಸಣೆಯ ಬಳಿಕವೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.
ಪರೀಕ್ಷೆಯು ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಂಡಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರದ ಸಮನ್ವಯದಿಂದ ಪರೀಕ್ಷಾ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.



