ಶೈಕ್ಷಣಿಕ, ಸಂಶೋಧನಾ ಹಾಗೂ ಭಾಷಾ ಕ್ಷೇತ್ರಕ್ಕೆ ನೀಡಿದ ಸೇವೆ ಶ್ಲಾಘಿಸಿದ ಕುಲಪತಿ ಮತ್ತು ಸಹೋದ್ಯೋಗಿಗಳು
ಪ್ರಾಧ್ಯಾಪಕಿ ಡಾ. ಮಂಜುಳಾಕ್ಷಿ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಕಲಬುರಗಿ, ಜು.31: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಭಾಷಾವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಮಂಜುಳಾಕ್ಷಿ ಎಲ್. ಅವರ ಸೇವಾನಿವೃತ್ತಿ ಅಂಗವಾಗಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಡಾ. ಮಂಜುಳಾಕ್ಷಿ ಅವರು ಭಾಷಾವಿಜ್ಞಾನ ವಿಭಾಗದ ಮೊದಲ ಪ್ರಾಧ್ಯಾಪಕಿಯಾಗಿ ವಿಭಾಗದ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವರು ತೋರಿದ ಬದ್ಧತೆ, ಶಿಸ್ತು ಮತ್ತು ಸಮರ್ಪಣಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಮಾತೃಭಾಷಾ ದಿನಾಚರಣೆಯಂತಹ ಕಾರ್ಯಕ್ರಮಗಳಿಗೆ ಅವರು ಪ್ರೇರಣೆಯಾಗಿದ್ದರು. ಆರೋಗ್ಯದ ಸಮಸ್ಯೆಗಳ ನಡುವೆಯೂ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ್ದು, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕುಲಪತಿಗಳು ಹೇಳಿದರು.
ಸೇವಾನಿವೃತ್ತಿ ಎನ್ನುವುದು ಸರ್ಕಾರಿ ನಿಯಮದ ಪ್ರಕಾರದ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಶಿಕ್ಷಕರು ಎಂದಿಗೂ ನಿವೃತ್ತರಾಗುವುದಿಲ್ಲ. ತಮ್ಮ ಜ್ಞಾನ ಮತ್ತು ಅನುಭವದ ಮೂಲಕ ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿಯೂ ಡಾ. ಮಂಜುಳಾಕ್ಷಿ ಅವರು ಶೈಕ್ಷಣಿಕ, ಸಂಶೋಧನಾ ಹಾಗೂ ಭಾಷಾ ಅನುವಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.
ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೋಟ ಸಾಯಿಕೃಷ್ಣ ಹಾಗೂ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪಿ. ಡೋಣೂರ ಮಾತನಾಡಿ, ಡಾ. ಮಂಜುಳಾಕ್ಷಿ ಅವರ ಶೈಕ್ಷಣಿಕ ಸೇವೆ, ಸಂಶೋಧನಾ ಸಾಧನೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಂಜುಳಾಕ್ಷಿ ಅವರು, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ವಿಶ್ವವಿದ್ಯಾಲಯದ ಆಡಳಿತ, ಸಹೋದ್ಯೋಗಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿಶ್ವವಿದ್ಯಾಲಯದೊಂದಿಗಿನ ತಮ್ಮ ಅನುಭವಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಡಾ. ಮಂಜುಳಾಕ್ಷಿ ಅವರಿಗೆ ಆತ್ಮೀಯವಾಗಿ ಗೌರವ ಸಲ್ಲಿಸಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು



