ರಾಜಕೀಯ

ಪಿಆರ್‌ಸಿ ಪ್ರಮಾಣಪತ್ರದಿಂದ ಆಂತರಿಕ ಭದ್ರತೆಗೆ ಅಪಾಯ: ರಾಜ್ಯ ಸರ್ಕಾರದ ಅಧಿಸೂಚನೆ ಹಿಂಪಡೆಯಲು ಬಿಜೆಪಿ ಆಗ್ರಹ

ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ ಹಾಗೂ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಬಿಜೆಪಿ ಆರೋಪ

ಬೀದರ್, ಜು.11: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಾಶ್ವತ ನಿವಾಸ ಪ್ರಮಾಣಪತ್ರ (ಪರ್ಮನೆಂಟ್ ರೆಸಿಡೆನ್ಸಿ ಸರ್ಟಿಫಿಕೆಟ್–ಪಿಆರ್‌ಸಿ) ವಿತರಣಾ ಪ್ರಕ್ರಿಯೆಯು ದೇಶದ ಆಂತರಿಕ ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಹೊಂದಿದ್ದು, ಈ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಆಗ್ರಹಿಸಿದ್ದಾರೆ.

ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಪಿಆರ್‌ಸಿ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಸಂವಿಧಾನಾತ್ಮಕ, ಕಾನೂನುಬದ್ಧ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು. ಈ ವಿಷಯವನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಹಸ್ತಕ್ಷೇಪ ಮಾಡಿ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಒತ್ತಾಯಿಸಿದರು.

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು “ಶಾಶ್ವತ ನಿವಾಸಿಗಳು” ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿರುವುದು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.

ಪಿಆರ್‌ಸಿ ನೀಡುವ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಪರಿಶೀಲನೆಯನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತಿದೆ. ಭಾರತೀಯ ಪೌರತ್ವವನ್ನು ಕೇಂದ್ರದ ಸಂಬಂಧಿತ ಸಂಸ್ಥೆಗಳ ಮೂಲಕ ಸಮಗ್ರವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದು ಗಂಭೀರ ವಿಷಯವಾಗಿದೆ. ಇದರಿಂದ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಯರು ಅಥವಾ ಅನಧಿಕೃತ ವಲಸಿಗರು ಸಹ ಸ್ಥಳೀಯ ದಾಖಲೆಗಳನ್ನು ಬಳಸಿ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೌರತ್ವ, ವಲಸೆ ಹಾಗೂ ಆಂತರಿಕ ಭದ್ರತೆ ಸಂಬಂಧಿತ ವಿಷಯಗಳು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ರೀತಿಯ ನಿವಾಸ ಪ್ರಮಾಣಪತ್ರವನ್ನು ನೀಡುವುದು ಕಾನೂನುಬಾಹಿರವಾಗಿದ್ದು, ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ಒಮ್ಮೆ ಪಿಆರ್‌ಸಿ ಪ್ರಮಾಣಪತ್ರ ಪಡೆದ ಬಳಿಕ ಅದನ್ನು ವಿವಿಧ ಸರ್ಕಾರಿ ಸೌಲಭ್ಯಗಳು, ಸರ್ಕಾರಿ ದಾಖಲೆಗಳು, ಶಿಕ್ಷಣ ಪ್ರವೇಶ, ಉದ್ಯೋಗಾವಕಾಶಗಳು ಹಾಗೂ ಇತರೆ ಸೇವೆಗಳಿಗಾಗಿ ಬಳಸುವ ಅವಕಾಶ ಇರುವುದರಿಂದ ಅನಧಿಕೃತ ನಿವಾಸಿಗಳಿಗೆ ಮಾನ್ಯತೆ ಸಿಗುವ ಅಪಾಯವೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಪಿಆರ್‌ಸಿ ಪ್ರಮಾಣಪತ್ರದ ಸಂವಿಧಾನಾತ್ಮಕ ಸಿಂಧುತ್ವವನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಬೇಕು. ಪರಿಶೀಲನೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಭಾರತೀಯ ಪೌರತ್ವದ ಸಮಗ್ರ ಪರಿಶೀಲನೆ ಇಲ್ಲದೆ ಯಾವುದೇ ಪಿಆರ್‌ಸಿ ಪ್ರಮಾಣಪತ್ರಗಳನ್ನು ನೀಡಬಾರದು ಎಂದು ಡಾ. ಶೈಲೇಂದ್ರ ಬೆಲ್ದಾಳೆ ಮತ್ತು ಸೋಮನಾಥ ಪಾಟೀಲ್ ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button