
ಕಲಬುರಗಿ, ಜು. 31: ನಗರದ ಮಹಾತ್ಮ ಬಸವೇಶ್ವರ ಕಾಲೋನಿಯ ಬಂಗಾರಮ್ಮ ದೇವಾಲಯದಲ್ಲಿ ಶುಕ್ರವಾರ ಭೋವಿ ಸಮಾಜದ ವತಿಯಿಂದ ಆಷಾಢ ಬುಟ್ಟಿ ಜಾತ್ರೆಯನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಲಕಮ್ಮ ದೇವಿ ಹಾಗೂ ಬಂಗಾರಮ್ಮ ದೇವಿಯ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿದವು.
ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಧಾರ್ಮಿಕ ಸಂಪ್ರದಾಯಗಳಂತೆ ವಿವಿಧ ಪೂಜಾ ಕೈಂಕರ್ಯಗಳು, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು. ಜಾತ್ರೆಯು ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ತುಕಾರಾಮ ನಾಯಿಂದ್ರಕರ, ಗಜೇಂದ್ರ ನಾಯಿಂದ್ರಕರ, ರಾಘವೇಂದ್ರ ತುಮಕೂರ, ದಯಾನಂದ ಮನೇಕರ್, ಅಂಬರೀಷ್ ಚಿಲಕನೂರ ಸೇರಿದಂತೆ ಸಮಾಜದ ಮುಖಂಡರು, ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.



