ಜಿಲ್ಲಾಸುದ್ದಿ

ಬರ ಘೋಷಣೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಸವಾರನ ಹೆಲ್ಮೆಟ್ ರಸ್ತೆಗೆ ಎಸೆದು ತೇಲ್ಕೂರ್ ಹುಚ್ಚಾಟ..!

ಕಲಬುರಗಿ, ಸೆ.2- ರಾಜ್ಯ ಸರ್ಕಾರ ಘೋಷಿಸಿರುವ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ತಾಲೂಕು ಇಲ್ಲದಿರುವುದನ್ನು ಖಂಡಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ನಾಯಕರೇ ಸಂಯಮದಿಂದ ವರ್ತಿಸದೆ ಸವಾರನ ವಿರುದ್ಧ ಅನಾಗರಿಕವಾಗಿ ನಡೆದುಕೊಂಡ ಘಟನೆ ನಡೆಯಿತು.

ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಅವರು ದ್ವಿಚಕ್ರ ವಾಹನ ಸವಾರನನ್ನು ತಡೆದು, ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸವಾರನ ತಲೆಯಲ್ಲಿದ್ದ ಹೆಲ್ಮೆಟ್‌ನ್ನು ಕಸಿದು ರಸ್ತೆಗೆ ಎಸೆಯುವ ಮೂಲಕ ಹುಚ್ಚಾಟ ಪ್ರದರ್ಶಿಸಿದರು. ಇದಲ್ಲದೆ ಕೆಲ ಬಿಜೆಪಿ ಕಾರ್ಯಕರ್ತರು ಕಾರಿನ ಕೀ ಕಸಿದುಕೊಂಡು ಉದ್ಧಟತನದಿಂದ ವರ್ತಿಸಿದರೆಂದು ಆರೋಪಿಸಲಾಗಿದೆ.

ಇನ್ನೊಂದು ಘಟನೆಯಲ್ಲಿ ಪ್ರತಿಭಟನಾಕಾರರ ಮಧ್ಯೆ ಕಾರೊಂದು ಸಾಗಲು ಯತ್ನಿಸಿದಾಗ ಹಲವರು ಆಕ್ರೋಶಗೊಂಡು ವಾಹನವನ್ನು ತಡೆದರು. ಸವಾರನಿಗೆ ತೀವ್ರ ತರಾಟೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಅವರು ಪ್ರತಿಭಟನಾಕಾರರನ್ನು ನಿಯಂತ್ರಿಸಿ ಕಾರು ಮುಂದೆ ಸಾಗಲು ಸಹಾಯ ಮಾಡಿದರು. ಆದಾಗ್ಯೂ, ಯಾವುದೇ ರೀತಿಯ ಅತಿರೇಕದ ವರ್ತನೆ ನಡೆಯದಂತೆ ನೋಡಿಕೊಳ್ಳಬೇಕಾದ ಸಂದರ್ಭದಲ್ಲೇ ಇಂತಹ ಘಟನೆಗಳು ನಡೆದವು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆಗೆ ಅಡ್ಡಲಾಗಿ ಕುಳಿತು ವಾಹನಗಳ ಸಂಚಾರ ಸ್ಥಗಿತಗೊಳಿಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಬೇಕು ಎಂಬ ಘೋಷಣೆಗಳೊಂದಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಮೂವರು ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಕೂಡಲೇ ಜಿಲ್ಲೆಯ ಬರಪೀಡಿತ ಪ್ರದೇಶಗಳನ್ನು ಗುರುತಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು. ಜಿಲ್ಲೆಯ ಎಲ್ಲ 11 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಬರ ಘೋಷಣೆ ಮಾಡದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ್ ಬಗಲಿ, ಶಾಸಕರಾದ ಬಸವರಾಜ ಮತ್ತಿಮೂಡ್, ಡಾ. ಅವಿನಾಶ್ ಜಾಧವ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ ಪಾಟೀಲ ತೇಲ್ಕೂರ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button