ಅಪರಾಧ

₹5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಕಲಬುರಗಿ ಪ್ರವಾಸೋದ್ಯಮ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ

ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಲಂಚಕ್ಕೆ ಬೇಡಿಕೆ ಆರೋಪ; ಹಿರಿಯೂರು ಬಳಿ ರೆಡ್‌ಹ್ಯಾಂಡ್ ಆಗಿ ಬಂಧನ

ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೂಲಗಳ ಪ್ರಕಾರ, ಹೊಸಪೇಟೆಯ ಗುತ್ತಿಗೆದಾರ ಲಕ್ಷ್ಮೀಕಾಂತ್ ಅವರು ಕೈಗೊಂಡಿದ್ದ ₹48 ಲಕ್ಷ ಮೌಲ್ಯದ ಕಾಮಗಾರಿಯ ತನಿಖೆ ನಡೆಸುವುದಾಗಿ ಬೆದರಿಕೆ ಹಾಕಿ, ತನಿಖೆ ತಪ್ಪಿಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಪೈಕಿ ಮೊದಲ ಕಂತಾಗಿ ₹5 ಲಕ್ಷ ಸ್ವೀಕರಿಸುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಿಪ್ಪೇಸ್ವಾಮಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ತಿಪ್ಪೇಸ್ವಾಮಿ ಅವರು ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದ್ದ ಇಲಾಖೆಯ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿ ಇನ್ನೂ ಮುಂದುವರಿದಿದ್ದರೂ ಮಧ್ಯದಲ್ಲೇ ನೆಪ ಹೇಳಿ ಹೊರಬಂದು, ಗುತ್ತಿಗೆದಾರನಿಗೆ ಹಿರಿಯೂರಿಗೆ ಹಣ ತಂದು ನೀಡುವಂತೆ ಸೂಚಿಸಿದ್ದರೆಂದು ತಿಳಿದುಬಂದಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುವ ವೇಳೆ ಅವರನ್ನು ವಶಕ್ಕೆ ಪಡೆದಿದ್ದಾರೆ.

ತಿಪ್ಪೇಸ್ವಾಮಿ ವಿರುದ್ಧ ಈ ಹಿಂದೆಯೂ ಲಂಚ ಹಾಗೂ ಅಕ್ರಮ ಹಣ ವಸೂಲಿ ಸಂಬಂಧ ಹಲವು ಆರೋಪಗಳು ಕೇಳಿಬಂದಿದ್ದವು. ಹೊಸ ಹೋಟೆಲ್‌ಗಳಿಗೆ ಅನುಮೋದನೆ ನೀಡಲು ಹಣ ಪಡೆಯುವುದು, ಸಬ್ಸಿಡಿ ಬಿಡುಗಡೆಗೆ ಕಮಿಷನ್ ವಸೂಲಿ ಮಾಡುವುದು ಹಾಗೂ ಇತ್ತೀಚೆಗೆ ಪ್ರಕಟವಾದ ಪ್ರವಾಸೋದ್ಯಮ ಇಲಾಖೆಯ ಕಾಫಿ ಟೇಬಲ್ ಬುಕ್ ಮುದ್ರಣ ಕಾರ್ಯವನ್ನು ಟೆಂಡರ್ ಪ್ರಕ್ರಿಯೆ ಇಲ್ಲದೆ ತಮ್ಮ ಆಪ್ತರಿಗೆ ನೀಡಿ ಕಮಿಷನ್ ಪಡೆದಿರುವ ಆರೋಪಗಳೂ ಕೇಳಿಬಂದಿವೆ.

ಈ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೆಲಕಾಲದಿಂದ ತಿಪ್ಪೇಸ್ವಾಮಿ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದರು. ಯೋಜಿತ ಕಾರ್ಯಾಚರಣೆಯಲ್ಲಿ ಅವರನ್ನು ಬಲೆಗೆ ಬೀಳಿಸಲು ಯಶಸ್ವಿಯಾಗಿದ್ದಾರೆ.

ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (ಎಸ್‌ಪಿ) ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related Articles

Leave a Reply

Your email address will not be published. Required fields are marked *

Back to top button