ಕೆಬಿಎನ್ ಆಸ್ಪತ್ರೆಯಲ್ಲಿ ಇಎನ್‌ಟಿ ಕಾರ್ಯಾಗಾರ: ಅಲರ್ಜಿಕ್ ರೈನೈಟಿಸ್ ಚಿಕಿತ್ಸೆಯ ಹೊಸ ಆಯಾಮಗಳ ಕುರಿತು ಚರ್ಚೆ
180ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಭಾಗವಹింపు; ತಜ್ಞರಿಂದ ಇಎನ್‌ಟಿ ಕ್ಷೇತ್ರದ ನೂತನ ಚಿಕಿತ್ಸಾ ವಿಧಾನಗಳ ಪರಿಚಯ

ನಗರದ ಖ್ಯಾತ ಕೆಬಿಎನ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ವತಿಯಿಂದ ‘ಡಿಮಿಸ್ಟಿಫೈಯಿಂಗ್ ಅಲರ್ಜಿಕ್ ರೈನೈಟಿಸ್’ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಭಾನುವಾರ ಆಯೋಜಿಸಲಾಯಿತು. ಅಲರ್ಜಿಕ್ ರೈನೈಟಿಸ್‌ನ ನಿಖರ ರೋಗನಿರ್ಣಯ, ಚಿಕಿತ್ಸೆ ಹಾಗೂ ನೂತನ ವೈದ್ಯಕೀಯ ತಂತ್ರಜ್ಞಾನಗಳ ಕುರಿತು ತಜ್ಞರು ಸಮಗ್ರ ಮಾಹಿತಿ ನೀಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕೆಬಿಎನ್ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಗುರುಪ್ರಸಾದ್, ಕೆಬಿಎನ್ ಆಸ್ಪತ್ರೆ ಸದಾ ನವೀನ ವೈದ್ಯಕೀಯ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ಬಡವರ ಸೇವೆಗೆ ಆಸ್ಪತ್ರೆ ನಿರಂತರವಾಗಿ ಬದ್ಧವಾಗಿದ್ದು, ಇಎನ್‌ಟಿ ವಿಭಾಗವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ, ಇಎನ್‌ಟಿ ವಿಭಾಗವು ನಿರಂತರವಾಗಿ ಶೈಕ್ಷಣಿಕ ಹಾಗೂ ವೈದ್ಯಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುವಂತೆ ಶುಭ ಹಾರೈಸಿದರು.
ಕಾರ್ಯಾಗಾರದಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ. ಗಾಯತ್ರಿ ಎಸ್. ಪಂಡಿತ್, ಮೆಡಿಕೇರಿ ಇಎನ್‌ಟಿ ಸೂಪರ್ ಸ್ಪೆಷಾಲಿಟಿ ಕೇಂದ್ರದ ಡಾ. ಶ್ರುತಿ ಮಂಜುನಾಥ್ ಹಾಗೂ ವೆಲ್ಲೂರಿನ ಡಾ. ಶ್ರದ್ಧಾ ಪವಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅಲರ್ಜಿಕ್ ರೈನೈಟಿಸ್ ಸೇರಿದಂತೆ ವಿವಿಧ ಇಎನ್‌ಟಿ ಸಂಬಂಧಿತ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಸುಮಾರು 180 ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಧಿಕಾ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ, ಇಎಸ್‌ಐ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಅನಿಲ್ ದೊಡಮನಿ, ಜಿಮ್ಸ್ ಆಸ್ಪತ್ರೆಯ ಡಾ. ರೇಣುಕಾ, ವಿಭಾಗದ ಮುಖ್ಯಸ್ಥ ಡಾ. ರಾಜೀವ್ ರೆಡ್ಡಿ, ಡಾ. ಸೈಯದ್ ಮುಷ್ತಾಕ್, ಡಾ. ರಜನೀಶ್ ಕೆ, ಡಾ. ದೀಪಿಕಾ, ಡಾ. ಶಾಫಿ ಮಝರ್, ಡಾ. ಭಾವನಾ, ಡಾ. ಶೋಯಬ್ ಅಮೀರ್, ಡಾ. ಆಯೇಷಾ ಸಿದ್ದಿಕಿ, ಡಾ. ವೈಷ್ಣವಿ, ಡಾ. ಸಮೀರಾ, ಡಾ. ಪದ್ಮ, ಡಾ. ಸಚಿನ್ ಶಾಹ, ಡಾ. ಚಂದ್ರಕಲಾ, ಡಾ. ಸಂಗೀತಾ, ಡಾ. ಅಸ್ಮಾ ಸೇರಿದಂತೆ ಅನೇಕ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಫೈಜಾ ರಹಮತ್ ನಿರೂಪಿಸಿದರು. ಶ್ರುತಿ ಮತ್ತು ಮೆಹಮೂದ್ ಪ್ರಾರ್ಥನೆ ಸಲ್ಲಿಸಿದರು. ಡಾ. ಸಮೀರ ಸ್ವಾಗತಿಸಿ, ಡಾ. ಆಯಿಷಾ ವಂದಿಸಿದರು.



