ಜಿಲ್ಲಾಸುದ್ದಿ

ಸ್ವಾತಂತ್ರ್ಯದ ನಿಜವಾದ ಅರ್ಥ ಅರಿಯಲು ಸೆ.17ರ ಇತಿಹಾಸ ಅರಿಯಿರಿ: ನಾಗಯ್ಯ ಹಿರೇಮಠ

ಚಿತ್ತಾಪುರ, ಸೆ.18: ಭಾರತ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ, ಹೈದರಾಬಾದ್ ಕರ್ನಾಟಕ ಭಾಗವು ಒಂದು ವರ್ಷ ತಡವಾಗಿ, 1948ರ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಪಡೆದಿದೆ. ಹೀಗಾಗಿ ಹೈದರಾಬಾದ್ ಕರ್ನಾಟಕ ವಿಮೋಚನೆಗೆ ರಕ್ತಸಿಕ್ತ ಹೋರಾಟದ ಇತಿಹಾಸವಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾಸೌಧ ಕಟ್ಟಡದ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವದ ಸಮಾರಂಭದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸವನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಈ ಭಾಗದ ಜನರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸುಲೇಪೇಟೆ ಏಕದಂಡಗಿ ಮಠದ ಶ್ರೀ ದೊಡೇಂದ್ರ ಮಹಾಸ್ವಾಮಿಗಳು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಹ್ಲಾದ ವಿಶ್ವಕರ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ದೇವೇಂದ್ರ ಅರಣಕಲ್ ಮಾತನಾಡಿದರು.

ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೈಲಾಸಪತಿ ವಿಶ್ವಕರ್ಮ ಅವರು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಹಿನ್ನೆಲೆ ಹಾಗೂ ಅದರ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಸಿಪಿಐ ಎಸ್.ಸಿ. ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಡಾ. ಶಂಕರ ಕಣ್ಣಿ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಟಾಳೆ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button