ಜೇವರ್ಗಿ ಕ್ಷೇತ್ರದಲ್ಲಿ 1.49 ಲಕ್ಷ ಗಣತಿ ನಮೂನೆಗಳ ಡಿಜಿಟೈಸೇಶನ್ ಪೂರ್ಣ
ಶೇ.100ರಷ್ಟು ಗಣತಿ ನಮೂನೆ ವಿತರಣೆ; ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ವೇಗ

ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಅಂಗವಾಗಿ 35-ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ನಮೂನೆಗಳ ಡಿಜಿಟೈಸೇಶನ್ ಕಾರ್ಯ ಭರದಿಂದ ಸಾಗುತ್ತಿದೆ. ಶನಿವಾರದ ಅಂತ್ಯದ ವೇಳೆಗೆ 1,49,152 ಮತದಾರರ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಮೊಬೈಲ್ ತಂತ್ರಾಂಶದ ಮೂಲಕ ಡಿಜಿಟೈಸ್ ಮಾಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಜೇವರ್ಗಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ತಿಳಿಸಿದ್ದಾರೆ.
ಕ್ಷೇತ್ರದ ಒಟ್ಟು 2,59,061 ಮತದಾರರಿಗೆ ಶೇ.100ರಷ್ಟು ಗಣತಿ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ.) ಮನೆ-ಮನೆ ಭೇಟಿ ನೀಡಿದ ವೇಳೆ 58 ಮತದಾರರು ಗೈರಾಗಿರುವುದು, 1,744 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 2,931 ಮಂದಿ ನಿಧನ ಹೊಂದಿರುವುದು ಹಾಗೂ 403 ಮಂದಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವುದು ವರದಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಗಣತಿ ನಮೂನೆಗಳ ಡಿಜಿಟೈಸೇಶನ್ ಕಾರ್ಯವನ್ನು ವೇಗವಾಗಿ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



