ಬೆಳೆ ಸಾಲ ಪಡೆದ ಎಲ್ಲ ರೈತರಿಗೆ ಶೇ.100ರಷ್ಟು ಬೆಳೆ ವಿಮೆ ನೋಂದಣಿ ಕಡ್ಡಾಯ: ಇಕ್ರಮ್ ಶರೀಫ್
ಒಂದು ವಾರದಲ್ಲಿ ಗುರಿ ಸಾಧಿಸಲು ಬ್ಯಾಂಕ್‌ಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ; 1.93 ಲಕ್ಷ ರೈತರಿಗೆ ವಿಮೆ ನೋಂದಣಿ ಅಭಿಯಾನ

ಜಿಲ್ಲೆಯ ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದಿರುವ ಎಲ್ಲ ರೈತರನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಬ್ಯಾಂಕ್‌ಗಳು ಹಾಗೂ ಪ್ಯಾಕ್ಸ್ (PACS) ಸಂಸ್ಥೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಕೃತ, ಖಾಸಗಿ, ಡಿಸಿಸಿ ಬ್ಯಾಂಕ್‌ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 1.93 ಲಕ್ಷ ರೈತರು ಬೆಳೆ ಸಾಲ ಪಡೆದಿದ್ದರೂ, ಇದುವರೆಗೆ ಕೇವಲ 9,980 ರೈತರು ಮಾತ್ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ಹೇಳಿದರು.
ಪ್ರತಿ ಬ್ಯಾಂಕ್‌ಗೆ ನಿಗದಿಪಡಿಸಿರುವ ಗುರಿಯಂತೆ ಮುಂದಿನ ಒಂದು ವಾರದೊಳಗೆ ಬೆಳೆ ಸಾಲ ಪಡೆದ ಎಲ್ಲ ರೈತರಿಂದ ಬೆಳೆ ವಿಮೆ ನೋಂದಣಿ ಪೂರ್ಣಗೊಳಿಸಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಅರ್ಹ ರೈತ ಈ ಯೋಜನೆಯಿಂದ ವಂಚಿತರಾಗದಂತೆ ಬ್ಯಾಂಕ್‌ಗಳು, ಪ್ಯಾಕ್ಸ್ ಸಂಸ್ಥೆಗಳು ಹಾಗೂ ಸಂಬಂಧಿತ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ 1.93 ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಒಟ್ಟು ₹3,260 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಸಾಲ ಪಡೆದ ರೈತರು ಬೆಳೆ ವಿಮೆ ಮಾಡಿಸದಿದ್ದರೆ ಪ್ರಕೃತಿ ವಿಕೋಪ ಸೇರಿದಂತೆ ಇತರ ಕಾರಣಗಳಿಂದ ಬೆಳೆ ಹಾನಿಯಾದಾಗ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ರೈತರ ಪರವಾಗಿ ವಿಮೆ ಕಂತನ್ನು ಸಂಬಂಧಿತ ಬ್ಯಾಂಕ್ ಅಥವಾ ಸಂಸ್ಥೆ ವಿಮಾ ಕಂಪನಿಗೆ ಪಾವತಿಸದಿದ್ದರೆ, ಬೆಳೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ಮೊತ್ತ ನೀಡುವ ಜವಾಬ್ದಾರಿ ಸಾಲ ನೀಡಿದ ಸಂಸ್ಥೆಯ ಮೇಲಿದೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಬ್ಯಾಂಕ್‌ಗಳಿಗೆ ನಿಗದಿಪಡಿಸಿದ ಗುರಿ:
ಬ್ಯಾಂಕ್ ಆಫ್ ಬರೋಡಾ – 850, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 1,000, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – 12,000, ಕರ್ನಾಟಕ ಗ್ರಾಮೀಣ ಬ್ಯಾಂಕ್ – 37,000, ಡಿಸಿಸಿ ಬ್ಯಾಂಕ್ – 80,000 ಹಾಗೂ ಪ್ಯಾಕ್ಸ್ ಸಂಸ್ಥೆಗಳು – 30,000 ರೈತರನ್ನು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸುವ ಗುರಿ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಯೋಜನೆಯ ಅನುಷ್ಠಾನ, ನೋಂದಣಿ ಪ್ರಕ್ರಿಯೆ, ಗಡುವು ಹಾಗೂ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಕಿಶೋರ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬ್ರೀಶ್ ತೆಗನೂರ, ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಜಿಲ್ಲಾ ವ್ಯವಸ್ಥಾಪಕರು ಮತ್ತು ಪ್ಯಾಕ್ಸ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



