ಮಳೆಯಾಗಲೆಂದು ಪೇಠಶಿರೂರಿನಲ್ಲಿ ಸರ್ವಧರ್ಮೀಯರಿಂದ ಜಲಪೂಜೆ
ಬರದ ಛಾಯೆ ದೂರವಾಗಲೆಂದು ದೇವಸ್ಥಾನ ಹಾಗೂ ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ • ಸರ್ವಧರ್ಮೀಯರ ಸಾಮರಸ್ಯಕ್ಕೆ ಸಾಕ್ಷಿಯಾದ ಆಚರಣೆ

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿರುವ ಪರಿಸ್ಥಿತಿಯಲ್ಲಿ, ತಾಲ್ಲೂಕಿನ ಪೇಠಶಿರೂರು ಗ್ರಾಮದಲ್ಲಿ ಸರ್ವಧರ್ಮೀಯರು ಒಗ್ಗೂಡಿ ಉತ್ತಮ ಮಳೆಯಾಗಲೆಂದು ವಿಶೇಷ ಜಲಪೂಜೆ ಹಾಗೂ ಪ್ರಾರ್ಥನೆ ನಡೆಸಿದರು.
ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರು ಜಾತಿ-ಮತ ಭೇದ ಮರೆತು ಒಟ್ಟಾಗಿ ಲಕ್ಷ್ಮೀ ದೇವಸ್ಥಾನ, ಮರೆಮ್ಮ ದೇವಸ್ಥಾನ, ಮಹಾತ್ಮ ರೇವಪ್ಪಯ್ಯ ಗುಡಿ, ಸಿದ್ಧಲಿಂಗೇಶ್ವರ ಮಠ, ಭೀಮಲಿಂಗೇಶ್ವರ ದೇವಸ್ಥಾನ ಹಾಗೂ ದೌಲ್ ಮಲಿಕ್ ದರ್ಗಾಗೆ ತೆರಳಿ ಪವಿತ್ರ ಜಲ ಅರ್ಪಿಸಿ ಪೂಜೆ ಸಲ್ಲಿಸಿದರು.
ಮಳೆ ಸಮೃದ್ಧಿಯಾಗಿ ಸುರಿದು ರೈತರಿಗೆ ಅನುಕೂಲವಾಗಲಿ, ಗ್ರಾಮದಲ್ಲಿ ಸುಭಿಕ್ಷ ನೆಲೆಸಲಿ ಎಂದು ಹಿರಿಯರು, ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ್, ರಾಜಶೇಖರ ಸರ್ವಶೆಟ್ಟಿ, ಶಿವಯ್ಯ ಗುತ್ತೇದಾರ, ಕಾಶೀನಾಥ ಲಾಳಿ, ದಶರಥ ಅಂಬಳಭಾವಿ, ದತ್ತು ಸರ್ವಶೆಟ್ಟಿ, ಅಲಿಸಾಬ್ ಸೇರಿದಂತೆ ಗ್ರಾಮಸ್ಥರು ಜಲಪೂಜೆಯಲ್ಲಿ ಪಾಲ್ಗೊಂಡಿದ್ದರು.



