ಪೊಲೀಸ್ ನೇಮಕಾತಿಯಲ್ಲಿ ಐಟಿಐಗೆ ದ್ವಿತೀಯ ಪಿಯುಸಿ ಸಮಾನ ಮಾನ್ಯತೆ ನೀಡಲು ಆಗ್ರಹ
ಎಲ್‌ಡಿವೈಒ ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ; ಎನ್‌ಐಒಎಸ್ ಭಾಷಾ ಕೋರ್ಸ್ ಕಡ್ಡಾಯ ನಿಯಮ ಹಿಂಪಡೆಯುವಂತೆ ಒತ್ತಾಯ

ಕಲಬುರಗಿ, ಜು.14: ರಾಜ್ಯದ ಸಿವಿಲ್ ಪೊಲೀಸ್, ಡಿಎಆರ್, ಸಿಎಆರ್ ಹಾಗೂ ಕೆಎಸ್‌ಆರ್‌ಪಿ ಸೇರಿದಂತೆ ವಿವಿಧ ಪೊಲೀಸ್ ನೇಮಕಾತಿಗಳಲ್ಲಿ ಐಟಿಐ ಕೋರ್ಸ್ ಅನ್ನು ದ್ವಿತೀಯ ಪಿಯುಸಿಗೆ ಸಮಾನ ಅರ್ಹತೆಯಾಗಿ ಪರಿಗಣಿಸಬೇಕು ಎಂದು ಎಲ್‌ಡಿವೈಒ ಜಿಲ್ಲಾ ಸಮಿತಿ ಕಾರ್ಯದರ್ಶಿ ರಮೇಶ್ ದೇವಕರ ಆಗ್ರಹಿಸಿದರು.
ಈ ಕುರಿತು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಹಿಂದೆ ಪೊಲೀಸ್ ನೇಮಕಾತಿಗಳಲ್ಲಿ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಐಟಿಐ ಜೊತೆಗೆ ಎನ್‌ಐಒಎಸ್ ಮೂಲಕ ಭಾಷಾ ಕೋರ್ಸ್ ಹಾಗೂ ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂಬ ನಿಯಮದಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಎನ್‌ಐಒಎಸ್ ಭಾಷಾ ಪರೀಕ್ಷೆಗಳು ನಿಯಮಿತವಾಗಿ ನಡೆಯದಿರುವುದು ಹಾಗೂ ಅದರ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಿಲ್ಲದಿರುವುದರಿಂದ ಐಟಿಐ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಐಟಿಐಯನ್ನು ದ್ವಿತೀಯ ಪಿಯುಸಿಗೆ ಸಮಾನವಾಗಿ ಪರಿಗಣಿಸಿ, ಎನ್‌ಐಒಎಸ್ ಕಡ್ಡಾಯ ನಿಯಮವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಇದಲ್ಲದೆ, ಡಿಎಆರ್–ಸಿಎಆರ್ ಪೊಲೀಸ್ ನೇಮಕಾತಿಯಲ್ಲಿಯೂ ಈ ಹಿಂದೆ ಇದ್ದ ಎಸ್‌ಎಸ್‌ಎಲ್‌ಸಿ ಅರ್ಹತೆಯನ್ನು ದ್ವಿತೀಯ ಪಿಯುಸಿಗೆ ಏರಿಸಿರುವುದರಿಂದ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ನಿಯಮಗಳನ್ನು ಮರುಪರಿಶೀಲಿಸಿ ಐಟಿಐ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುಟ್ಟರಾಜ್ ಲಿಂಗಶೆಟ್ಟಿ, ಸತೀಶ್ ಶರ್ಮಾ, ಪವನ್ ವರ್ಮಾ, ರಘು ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



