ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಕಾಲ್ಪನಿಕ ವೇತನ ಜಾರಿಗೆ ಆಗ್ರಹ
2006ರ ಏಪ್ರಿಲ್ 1ಕ್ಕೂ ಮುನ್ನ ಹಾಗೂ ನಂತರ ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಲು ಒತ್ತಾಯ

ಕಲಬುರಗಿ, ಸೆ.1: ಕರ್ನಾಟಕ ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ 2006ರ ಏಪ್ರಿಲ್ 1ರಂದು ಪುನರ್ ನೇಮಕ ಹೊಂದಿದ ಹಾಗೂ ಅದಕ್ಕೂ ಮೊದಲು ಮತ್ತು ನಂತರ ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ಕಾಲ್ಪನಿಕ ವೇತನ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಕಾಲ್ಪನಿಕ ವೇತನ ಸಂಘಟನೆಗಳ ಸಮಿತಿಯ ಪಿಂಚಣಿ ವಂಚಿತರ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಪಿ.ಎಸ್. ಕೊಕಟನೂರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಉಚ್ಚ ನ್ಯಾಯಾಲಯವು ಹಲವು ರಿಟ್ ಅರ್ಜಿಗಳಲ್ಲಿ ಅನುದಾನ ರಹಿತ ಅವಧಿಯ ಸೇವೆಗೆ ಸಂಬಂಧಿಸಿದಂತೆ ಅನುದಾನಿತ ನೌಕರರಿಗೆ ಮುಂಬಡ್ತಿ, ಸೇವಾ ಜೇಷ್ಠತೆ, ರಜೆ ಹಾಗೂ ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದೆ. ಆದಾಗ್ಯೂ, ರಾಜ್ಯ ಸರ್ಕಾರವು ಈ ಆದೇಶಗಳ ವಿರುದ್ಧ ಹಲವು ರಿಟ್ ಮೇಲ್ಮನವಿಗಳನ್ನು ಸಲ್ಲಿಸಿದೆ ಎಂದು ಹೇಳಿದರು.
ಸಂಬಂಧಿತ ವಿಭಾಗೀಯ ಪೀಠಗಳಿಂದ ಕೆಲವು ರಿಟ್ ಮೇಲ್ಮನವಿಗಳು ವಜಾಗೊಂಡಿದ್ದರೂ, ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿಗಳನ್ನು ಸಲ್ಲಿಸಿತ್ತು. ವಿಶೇಷ ಅನುಮತಿ ಅರ್ಜಿಗಳನ್ನು 2013ರ ಆಗಸ್ಟ್‌ನಲ್ಲಿಯೇ ವಜಾಗೊಳಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕವೂ ಅನುದಾನ ರಹಿತ ಅವಧಿಯ ಸೇವೆಯನ್ನು ಪರಿಗಣಿಸುವಂತೆ ನೌಕರರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಸಾಂವಿಧಾನಿಕ ನ್ಯಾಯಾಲಯಗಳ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಅನೇಕ ಅನುದಾನಿತ ನೌಕರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2014ರಲ್ಲಿ ಕಾಯ್ದೆಯೊಂದನ್ನು ಜಾರಿಗೆ ತಂದು ಅನುದಾನಿತ ನೌಕರರ ಸಾಂವಿಧಾನಿಕ ಸೇವಾ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
2015ರಲ್ಲಿ ಕಾಯ್ದೆ ರದ್ದುಗೊಳಿಸಿದ ನ್ಯಾಯಪೀಠ
2014ರ ಕಾಯ್ದೆಯಿಂದ ಬಾಧಿತರಾದ ಹಲವು ನೌಕರರು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠವು ಸುದೀರ್ಘ ವಿಚಾರಣೆಯ ಬಳಿಕ 2015ರ ಜುಲೈ 10ರಂದು ಅಂತಿಮ ಆದೇಶ ಹೊರಡಿಸಿ, 2014ರ ಕಾಯ್ದೆಯನ್ನು ರದ್ದುಗೊಳಿಸಿ ಆದೇಶಿಸಿತ್ತು ಎಂದು ಡಾ. ಪಿ.ಎಸ್. ಕೊಕಟನೂರ್ ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಗಳ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಬಳಿಕ 2015ರ ಜುಲೈ 24ರಂದು ವಿಭಾಗೀಯ ಪೀಠವೂ ತೀರ್ಪು ನೀಡಿದೆ ಎಂದು ಹೇಳಿದರು.
ಕಾಲ್ಪನಿಕ ವೇತನ, ಪಿಂಚಣಿ ಸೌಲಭ್ಯಕ್ಕೆ ಒತ್ತಾಯ
ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಹಾಗೂ 2014ರ ಕಾಯ್ದೆ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನೌಕರರು ಕಾಲ್ಪನಿಕ ವೇತನ, ಪಿಂಚಣಿ ಹಾಗೂ ಇತರ ಸೇವಾ ಸೌಲಭ್ಯಗಳಿಗಾಗಿ ಕಾಯುತ್ತಿದ್ದಾರೆ. ಈ ಬೇಡಿಕೆಯನ್ನು ಮಾನವೀಯ ಹಾಗೂ ಕಾನೂನು ದೃಷ್ಟಿಯಿಂದ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಹಲವು ಬಾರಿ ಅನುದಾನಿತ ಶಾಲಾ-ಕಾಲೇಜುಗಳ ಸಂಘಟನೆಗಳ ಸಮಿತಿಯ ಸದಸ್ಯರು ಸರ್ಕಾರದ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರೂ, ಕಾಲ್ಪನಿಕ ವೇತನ ಹಾಗೂ ಪಿಂಚಣಿ ಸೌಲಭ್ಯಗಳನ್ನು ಜಾರಿಗೊಳಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2006ರ ಏಪ್ರಿಲ್ 1ಕ್ಕೂ ಮುನ್ನ ನೇಮಕಗೊಂಡು ಆ ದಿನಾಂಕಕ್ಕೂ ಮೊದಲು ಮತ್ತು ನಂತರ ಅನುದಾನಕ್ಕೆ ಒಳಪಟ್ಟಿರುವ ಸಿಬ್ಬಂದಿಗೆ ಕಾಲ್ಪನಿಕ ವೇತನ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಉಚ್ಚ ನ್ಯಾಯಾಲಯದ ಆದೇಶದಂತೆ ಜಾರಿಗೊಳಿಸಬೇಕು. ಈ ಕುರಿತು ಕೂಡಲೇ ಕ್ರಮ ಕೈಗೊಂಡು ಮುಖ್ಯಮಂತ್ರಿಗಳ ಗಮನಕ್ಕೆ ಸಮಸ್ಯೆಯನ್ನು ತಂದು ಪರಿಹಾರ ಕಲ್ಪಿಸಬೇಕು ಎಂದು ಡಾ. ಪಿ.ಎಸ್. ಕೊಕಟನೂರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಟೆಕ್ನಿಕ್ ಬೋಧಕೇತರ ಸಂಘದ ರಾಜ್ಯಾಧ್ಯಕ್ಷೆ ರಾಜಶ್ರೀ ಎಸ್. ಚೌಧರಿ, ಪಾಲಿಟೆಕ್ನಿಕ್ ಬೋಧಕ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಎಲ್. ಶಿವಾನಂದಸ್ವಾಮಿ, ಶ್ರೀಶೈಲ ಗುಡದಿನ್ನಿ, ಕರಬಸಪ್ಪ, ರಮೇಶ್ ವಗ್ಗೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.



