ಮನರಂಜನೆ

‘ಮೈಕಲ್’ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ: 1 ಬಿಲಿಯನ್ ಡಾಲರ್ ಕ್ಲಬ್ ಸೇರಿದ ಮೊದಲ ಜೀವನಚರಿತ್ರೆ ಸಿನಿಮಾ

ಜಾಫರ್ ಜಾಕ್ಸನ್ ಅಭಿನಯದ ‘ಮೈಕಲ್’ ವಿಶ್ವದಾದ್ಯಂತ ಭರ್ಜರಿ ಯಶಸ್ಸು; ‘ಒಪೆನ್‌ಹೈಮರ್’ ದಾಖಲೆಯನ್ನೂ ಹಿಂದಿಕ್ಕಿದ ಸಿನಿಮಾ

ಲಾಸ್ ಏಂಜೆಲಿಸ್: ಪಾಪ್ ಸಂಗೀತದ ದಂತಕಥೆ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ‘ಮೈಕಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ನಟ ಜಾಫರ್ ಜಾಕ್ಸನ್ ಅಭಿನಯದ ಈ ಚಿತ್ರವು ಜಾಗತಿಕ ಮಟ್ಟದಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್‌ಗೂ ಅಧಿಕ ಗಳಿಕೆ ಮಾಡುವ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ಜೀವನಚರಿತ್ರೆ (ಬಯೋಪಿಕ್) ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವರದಿಗಳ ಪ್ರಕಾರ, ಚಿತ್ರವು ಉತ್ತರ ಅಮೆರಿಕದಲ್ಲಿ 371.8 ಮಿಲಿಯನ್ ಡಾಲರ್ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ 629.8 ಮಿಲಿಯನ್ ಡಾಲರ್ ಗಳಿಸಿ, ಒಟ್ಟಾರೆ 1.001 ಬಿಲಿಯನ್ ಡಾಲರ್ ಕಲೆಕ್ಷನ್ ದಾಖಲಿಸಿದೆ.

ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಮೊದಲ ವಾರಾಂತ್ಯದಲ್ಲೇ ದೇಶೀಯವಾಗಿ 97 ಮಿಲಿಯನ್ ಡಾಲರ್ ಹಾಗೂ ಜಾಗತಿಕವಾಗಿ 217 ಮಿಲಿಯನ್ ಡಾಲರ್ ಗಳಿಸಿ, ಸಂಗೀತಾಧಾರಿತ ಜೀವನಚರಿತ್ರೆ ಚಿತ್ರಗಳ ಆರಂಭಿಕ ವಾರಾಂತ್ಯದ ಹೊಸ ದಾಖಲೆಯನ್ನು ನಿರ್ಮಿಸಿತ್ತು.

ಇದರೊಂದಿಗೆ, 2018ರಲ್ಲಿ ಬಿಡುಗಡೆಯಾಗಿ 911 ಮಿಲಿಯನ್ ಡಾಲರ್ ಗಳಿಸಿದ್ದ ‘ಬೋಹೀಮಿಯನ್ ರ್ಯಾಪ್ಸೊಡಿ’ ಚಿತ್ರದ ದಾಖಲೆಯನ್ನು ಮುರಿದು, ಅತಿ ಹೆಚ್ಚು ಗಳಿಕೆ ಮಾಡಿದ ಸಂಗೀತಾಧಾರಿತ ಬಯೋಪಿಕ್ ಎಂಬ ಸ್ಥಾನವನ್ನೂ ‘ಮೈಕಲ್’ ಪಡೆದುಕೊಂಡಿದೆ.

ಇದೇ ವೇಳೆ, ಲಯನ್ಸ್‌ಗೇಟ್ ಸ್ಟುಡಿಯೋ ಇತಿಹಾಸದಲ್ಲೇ 1 ಬಿಲಿಯನ್ ಡಾಲರ್ ಕ್ಲಬ್ ಸೇರಿದ ಮೊದಲ ಚಿತ್ರವಾಗಿಯೂ ‘ಮೈಕಲ್’ ದಾಖಲೆ ಬರೆದಿದೆ. ಅಲ್ಲದೆ, ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಒಪೆನ್‌ಹೈಮರ್’ ಚಿತ್ರದ ಜಾಗತಿಕ ಗಳಿಕೆಯನ್ನೂ ಈ ಸಿನಿಮಾ ಹಿಂದಿಕ್ಕಿದೆ.

ಮೈಕಲ್ ಚಿತ್ರದ ವಿಶೇಷತೆ

ನಿರ್ದೇಶಕ ಆಂಟೊಯಿನ್ ಫುಕ್ವಾ ನಿರ್ದೇಶಿಸಿರುವ ‘ಮೈಕಲ್’ ಚಿತ್ರವು ಜಾಕ್ಸನ್ 5 ಸಂಗೀತ ತಂಡದಿಂದ ಆರಂಭವಾಗಿ, ‘ಕಿಂಗ್ ಆಫ್ ಪಾಪ್’ ಆಗಿ ಮೈಕಲ್ ಜಾಕ್ಸನ್ ಬೆಳೆದ ಪಯಣವನ್ನು ತೆರೆ ಮೇಲೆ ಕಟ್ಟಿಕೊಡುತ್ತದೆ. ಈ ಚಿತ್ರದಲ್ಲಿ ಮೈಕಲ್ ಜಾಕ್ಸನ್ ಪಾತ್ರವನ್ನು ಅವರ ಸೋದರಳಿಯ ಜಾಫರ್ ಜಾಕ್ಸನ್ ನಿರ್ವಹಿಸಿದ್ದು, ಇದೇ ಅವರ ಮೊದಲ ಸಿನಿಮಾ.

ಚಿತ್ರದಲ್ಲಿ ಕೋಲ್ಮನ್ ಡೊಮಿಂಗೊ ಮತ್ತು ನಿಯಾ ಲಾಂಗ್ ಅವರು ಕ್ರಮವಾಗಿ ಮೈಕಲ್ ಅವರ ತಂದೆ ಜೋ ಜಾಕ್ಸನ್ ಹಾಗೂ ತಾಯಿ ಕ್ಯಾಥರಿನ್ ಜಾಕ್ಸನ್ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಕಥೆ 1988ರವರೆಗೆ ನಡೆದ ಮೈಕಲ್ ಜಾಕ್ಸನ್ ಅವರ ಯಶಸ್ಸಿನ ಪಯಣವನ್ನು ಮಾತ್ರ ಒಳಗೊಂಡಿದ್ದು, ನಂತರದ ವರ್ಷಗಳಲ್ಲಿ ಅವರ ವಿರುದ್ಧ ಕೇಳಿಬಂದ ವಿವಾದಾತ್ಮಕ ಆರೋಪಗಳನ್ನು ಚಿತ್ರದಲ್ಲಿ ಒಳಪಡಿಸಲಾಗಿಲ್ಲ.

ವಿಶ್ವ ಸಂಗೀತ ಇತಿಹಾಸದಲ್ಲಿ ಅಪ್ರತಿಮ ಸಾಧನೆ ಮಾಡಿದ ಮೈಕಲ್ ಜಾಕ್ಸನ್ ಅವರ ಜೀವನವನ್ನು ತೆರೆ ಮೇಲೆ ತಂದಿರುವ ಈ ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲೂ ಹೊಸ ಇತಿಹಾಸ ನಿರ್ಮಿಸಿ ಹಾಲಿವುಡ್‌ನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.

Related Articles

Leave a Reply

Your email address will not be published. Required fields are marked *

Back to top button