ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪರ್ಧೆ ಬೆಳೆಯಲಿ: ಬಿ.ಜಿ. ಶೆಟ್ಕಾರ್
ಸ್ಪರ್ಧೆ ಯಶಸ್ಸಿನ ಮೆಟ್ಟಿಲು; ಸೋಲು ಆತ್ಮವಿಶ್ವಾಸ ಕಳೆದುಕೊಳ್ಳುವ ಕಾರಣವಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು

ಬೀದರ್, ಜು.11: ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪರ್ಧಾ ಮನೋಭಾವ ಇರಬೇಕು. ಗೆದ್ದವರು ಸಂತಸಪಡಬೇಕು, ಸೋತವರು ಮತ್ತಷ್ಟು ಶ್ರಮಪಟ್ಟು ಮುಂದಿನ ಬಾರಿ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು ಎಂದು ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಶೆಟ್ಕಾರ್ ಹೇಳಿದರು.
ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟ್ಕಾರ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಎಂಟನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಾವುದೇ ಕಾರಣಕ್ಕೂ ನಿರಾಶರಾಗಬಾರದು. ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಶಿಕ್ಷಣ ಸಂಸ್ಥೆ ಹಾಗೂ ತಮ್ಮ ಪಾಲಕರಿಗೆ ಕೀರ್ತಿ ತರುವ ರೀತಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಸ್ವಾತ್ಮಾನಂದಗಿರಿ ಸ್ವಾಮೀಜಿ ಮಾತನಾಡಿ, ವಿನಯದಿಂದ ವಿದ್ಯೆಗೆ ಗೌರವ ಹೆಚ್ಚುತ್ತದೆ. ಉತ್ತಮ ಸಂಸ್ಕಾರಗಳೊಂದಿಗೆ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಗುರುಗಳು ಹಾಗೂ ಹಿರಿಯರಿಗೆ ಗೌರವ ನೀಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಯಾವುದೇ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ರಫಿ ತಾಳಿಕೋಟಿ, ಯಶಸ್ಸು ನಿರಂತರ ಪರಿಶ್ರಮದಿಂದ ಮಾತ್ರ ದೊರೆಯುತ್ತದೆ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಸಿಗುವ ಅತ್ಯುತ್ತಮ ಗೌರವ ಎಂದು ಹೇಳಿದರು.
ದಯಾನಂದ ಭೋಸಲೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊರೆಯುವ ಪ್ರತಿಯೊಂದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಪ್ರತಿಭೆಗೆ ಸೂಕ್ತ ಮೌಲ್ಯ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಸಮಯ ಪಾಲನೆ, ಶಿಸ್ತು, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬಹುದು. ಪಾಲಕರ ಮಾತು ಕೇಳಬೇಕು, ಪರಿಶ್ರಮಪಟ್ಟು ವಿದ್ಯಾಭ್ಯಾಸ ಮಾಡಬೇಕು ಹಾಗೂ ಕೆಟ್ಟ ಚಟ ಮತ್ತು ಕೆಟ್ಟ ಸಹವಾಸದಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಾನಿ ಮತ್ತು ಅಕ್ಷತಾ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿ, ದೇವಿಕಾ ವಂದಿಸಿದರು.



