ನಾಳೆಯಿಂದ ಕಲಬುರಗಿಯಲ್ಲಿ ಶಾಲೆ-ಕಾಲೇಜುಗಳ ಸುತ್ತ ವಿಶೇಷ ಸಂಚಾರ ತಪಾಸಣೆ
ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ; ಜುಲೈ 1ರಿಂದ 10ರವರೆಗೆ 4,078 ಪ್ರಕರಣ, ₹22.19 ಲಕ್ಷ ದಂಡ

ಕಲಬುರಗಿ, ಜು.11: ನಗರದ ಶಾಲೆ-ಕಾಲೇಜುಗಳ ಸುತ್ತಮುತ್ತ ಸಂಚಾರ ನಿಯಮ ಪಾಲನೆಗೆ ಒತ್ತು ನೀಡುವ ಉದ್ದೇಶದಿಂದ ಜುಲೈ 13ರಿಂದ ವಿಶೇಷ ಸಂಚಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಕಳೆದ 10 ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 4,078 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು ₹22,19,200 ದಂಡ ವಿಧಿಸಲಾಗಿದೆ. ರಸ್ತೆ ಸುರಕ್ಷತೆ ಹೆಚ್ಚಿಸುವುದು, ಸಂಚಾರ ಶಿಸ್ತು ಕಾಪಾಡುವುದು ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿದ್ದರೂ, ಕೆಲ ಯುವಕರು ಹಾಗೂ ವಾಹನ ಸವಾರರು ಇನ್ನೂ ನಿಯಮಗಳನ್ನು ಪಾಲಿಸುತ್ತಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಜುಲೈ 1ರಿಂದ 10ರವರೆಗೆ ನಡೆದ ವಿಶೇಷ ತಪಾಸಣೆಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ 3,932 ಮಂದಿಯಿಂದ ₹19.66 ಲಕ್ಷ, ಹಿಂಬದಿ ಸವಾರರು ಹೆಲ್ಮೆಟ್ ಧರಿಸದ 14 ಮಂದಿಯಿಂದ ₹17 ಸಾವಿರ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 23 ಮಂದಿಯಿಂದ ₹1.90 ಲಕ್ಷ, ಸೀಟ್‌ಬೆಲ್ಟ್ ಧರಿಸದ 36 ಮಂದಿಯಿಂದ ₹18 ಸಾವಿರ, ಟ್ರಿಪಲ್ ರೈಡಿಂಗ್ ಮಾಡಿದ 32 ಮಂದಿಯಿಂದ ₹16 ಸಾವಿರ, ತಿರುಚಿದ ನಂಬರ್ ಪ್ಲೇಟ್ ಬಳಸಿದ 47 ಮಂದಿಯಿಂದ ₹3,500, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ 10 ಮಂದಿಯಿಂದ ₹5 ಸಾವಿರ ಹಾಗೂ ಅತಿವೇಗದಲ್ಲಿ ವಾಹನ ಚಲಾಯಿಸಿದ ಒಬ್ಬನಿಂದ ₹1 ಸಾವಿರ ದಂಡ ವಸೂಲಿ ಮಾಡಲಾಗಿದೆ.
ಇತರೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೂ ದಂಡ ವಿಧಿಸಲಾಗಿದ್ದು, ಕಳೆದ ಕೆಲವು ವಾರಗಳಿಂದ ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯಾರ್ಥಿಗಳು, ಯುವಕರು, ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಈ ವಿಶೇಷ ಕಾರ್ಯಾಚರಣೆ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ವಾಹನ ಸವಾರರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತ ಸಂಚಾರಕ್ಕೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.



