ಸಿ.ಎ. ನಿವೇಶನ ದುರ್ಬಳಕೆ ಆರೋಪ: ಸಿಬಿಐ ತನಿಖೆಗೆ ಆಗ್ರಹಿಸಿ ಕುಡಾ ಕಚೇರಿ ಎದುರು ಧರಣಿ, ಒಂದು ತಿಂಗಳಲ್ಲಿ ಕ್ರಮದ ಭರವಸೆ
ನಿಯಮ ಉಲ್ಲಂಘಿಸಿ ವಾಣಿಜ್ಯ ಬಳಕೆ ಆರೋಪ; ಲೀಸ್ ರದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲು ಹೋರಾಟಗಾರರ ಒತ್ತಾಯ

ಕಲಬುರಗಿ, ಜು. 10: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ವತಿಯಿಂದ ಸಾರ್ವಜನಿಕ ಸೌಲಭ್ಯಕ್ಕಾಗಿ (ಸಿ.ಎ. ನಿವೇಶನ) ಹಂಚಿಕೆ ಮಾಡಲಾದ ಜಾಗವನ್ನು ನಿಯಮಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಟ್ರಸ್ಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ಲೀಸ್ ರದ್ದುಪಡಿಸುವುದು ಹಾಗೂ ಅಕ್ರಮಗಳಿಗೆ ಸಹಕರಿಸಿದ ಅಧಿಕಾರಿಗಳ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಕುಡಾ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಹೋರಾಟಗಾರರ ಪ್ರಕಾರ, ಕನ್ನಡ ಶಾಲೆ ನಡೆಸಲು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಸಿ.ಎ. ನಿವೇಶನವನ್ನು ಮೂಲ ಉದ್ದೇಶಕ್ಕೆ ವಿರುದ್ಧವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಅಲ್ಲದೆ, ಗುತ್ತಿಗೆ ಆಸ್ತಿಯನ್ನು ನಿಯಮಗಳಿಗೆ ವಿರುದ್ಧವಾಗಿ ಖಾತೆ ಬದಲಾವಣೆ ಮಾಡಿಕೊಂಡಿರುವುದು ಪ್ರಾಧಿಕಾರದ ಆಸ್ತಿಯ ದುರ್ಬಳಕೆಯಾಗಿದ್ದು, ಇದು ಗಂಭೀರ ಅಕ್ರಮವಾಗಿದೆ ಎಂದು ಆರೋಪಿಸಿದರು.
ಹೋರಾಟಗಾರರು ತಕ್ಷಣವೇ ಸಿ.ಎ. ನಿವೇಶನದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಟ್ರಸ್ಟ್‌ಗೆ ನೀಡಿರುವ ಲೀಸ್ ರದ್ದುಪಡಿಸಿ, ಆಸ್ತಿಯನ್ನು ಕುಡಾ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಜೊತೆಗೆ ಅಕ್ರಮ ಖಾತೆ ಬದಲಾವಣೆ ನಡೆಸಿದವರು ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ವಿಷಯದ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತು ಮಾಡಿ ಅವರ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಕುಡಾ ಅಧ್ಯಕ್ಷರು ಹಾಗೂ ಆಯುಕ್ತರೊಂದಿಗೆ ನಡೆದ ಮಾತುಕತೆಯಲ್ಲಿ, ಒಂದು ತಿಂಗಳೊಳಗೆ ಪ್ರಕರಣ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರು ತಮ್ಮ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡರು.
ಧರಣಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ, ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಹುಚ್ಚೇಶ್ವರ ವಠಾರ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರವಣಕುಮಾರ ನಾಯಕ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಶಿವಲಿಂಗ ಹಳಿಮನಿ, ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷ ಮಹೇಶ್ ಕೆಂಬಾವಿ, ರಾಜು ವಾಗಮೊರೆ, ಗಣೇಶ್ ರಾಥೋಡ್, ವೀರೇಶ್ ಬಿಂಗೆ, ರವಿ ರಾಠೋಡ್, ಪ್ರಶಾಂತ್ ಶಿರೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.



