ಶಿಕ್ಷಣ

ಜುಲೈ 19ರಂದು ಕಲಬುರ್ಗಿಯಲ್ಲಿ ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷ ರಾಜೇಂದ್ರ ಕೊರಬಾ ಝಳಕಿಗೆ ಕಮಕನೂರ್ ಸನ್ಮಾನ

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ; ಶಿಕ್ಷಕರ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್

ಕಲಬುರ್ಗಿ, ಜು. 10: ನಗರದ ಕನ್ನಡ ಭವನದಲ್ಲಿ ಜುಲೈ 19ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಶಿಕ್ಷಕ ಹಾಗೂ ಸಾಹಿತಿ ರಾಜೇಂದ್ರ ಕೊರಬಾ ಝಳಕಿ ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ತಮ್ಮ ನಿವಾಸದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಶಿಕ್ಷಕರ ಸಾಹಿತ್ಯ ಸಮ್ಮೇಳನ ಶ್ಲಾಘನೀಯ ಕಾರ್ಯಕ್ರಮವಾಗಿದೆ. ಇಂತಹ ಸಮ್ಮೇಳನಕ್ಕೆ ಶಿಕ್ಷಕ ಮತ್ತು ಸಾಹಿತಿ ರಾಜೇಂದ್ರ ಕೊರಬಾ ಝಳಕಿ ಸರ್ವಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ರಾಜೇಂದ್ರ ಕೊರಬಾ ಝಳಕಿ ಅವರು ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದು, ಸರ್ಕಾರಿ ನೌಕರರಲ್ಲಿ ಇಂತಹ ಬಹುಮುಖ ಪ್ರತಿಭೆಗಳು ವಿರಳ. ಅವರಿಗೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ದೊರೆತಿರುವುದು ಸಮಾಜಕ್ಕೆ ಸಂದ ಗೌರವವಾಗಿದೆ ಎಂದು ಕಮಕನೂರ್ ಅಭಿಪ್ರಾಯಪಟ್ಟರು.

ಈ ವೇಳೆ ರಾಜೇಂದ್ರ ಕೊರಬಾ ಝಳಕಿ ಅವರು ಸಹ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪಿಡಿಒ ಸಾಯಬಣ್ಣ ವಡಗೇರಿ, ನಿವೃತ್ತ ಪ್ರಾಂಶುಪಾಲ ಟಿ.ವಿ. ಅಂಬಿಗೇರ್, ಗುರುನಾಥ ಚಿಂಚನಸೂರ್, ಮಲ್ಲಿಕಾರ್ಜುನ ಜೋಕೆ, ಸಂಗಮನಾಥ ಕಣ್ಣಿ, ಭೋಗೇಶ್ ಕೊರಬಾ ಝಳಕಿ, ಶಿವಕುಮಾರ್ ತಳವಾರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ವಡಗೇರಿ, ಬಸವರಾಜ ಸುರಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಏರಿ ಅಧ್ಯಕ್ಷರಾಗಿ, ನಿವೃತ್ತ ಇಂಜಿನಿಯರ್ ನೀಲಕಂಠ ಜಮಾದಾರ್ ಗೌರವಾಧ್ಯಕ್ಷರಾಗಿ ಹಾಗೂ ಮಲ್ಲಿನಾಥ ನಾಗನಳ್ಳಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಹಾಗೂ ಸಮಿತಿಯ ಪದಾಧಿಕಾರಿಗಳು ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ.

ರಾಜೇಂದ್ರ ಕೊರಬಾ ಝಳಕಿ ಪರಿಚಯ

1967ರ ಮೇ 1ರಂದು ಆಳಂದ ತಾಲ್ಲೂಕಿನ ಝಳಕಿ (ಬಿ) ಗ್ರಾಮದಲ್ಲಿ ಜನಿಸಿದ ರಾಜೇಂದ್ರ ಕೊರಬಾ ಝಳಕಿ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಉನ್ನತ ಶಿಕ್ಷಣದ ಬಳಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕಲಬುರ್ಗಿಯ ರೋಜಾ ಬಡಾವಣೆಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಕರಾಗಿರುವುದರ ಜೊತೆಗೆ ಅವರು ಸಾಹಿತ್ಯ ಕ್ಷೇತ್ರದಲ್ಲೂ ವಿಶಿಷ್ಟ ಛಾಪು ಮೂಡಿಸಿದ್ದಾರೆ. ‘ಕಲ್ಲರಳಿ ಕರುಳು’, ‘ಚಿಗುರು ಚೇತನ’, ‘ಬೆಳಸುಗಳು’, ‘ಅಕ್ಷರ ಅರಿವು’, ‘ತಾತಾ’, ‘ಅರಿವೆ ಗುರು’, ‘ಆಧುನಿಕ ವಚನಗಳು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನ ವಾಚನ, ಕವಿಗೋಷ್ಠಿ ಅಧ್ಯಕ್ಷತೆ ಹಾಗೂ ಉಪನ್ಯಾಸಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ಅವರಿಗೆ ‘ಕಲ್ಯಾಣ ಕರ್ನಾಟಕ ಸಾಧಕ ಪ್ರಶಸ್ತಿ’, ‘ರಾಷ್ಟ್ರೀಯ ಬಸವ ರತ್ನ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಜುಲೈ 19ರಂದು ನಡೆಯಲಿರುವ ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನವು ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಲಿ ಹಾಗೂ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಲಿ ಎಂಬ ಆಶಯವನ್ನು ಶಿಕ್ಷಣ ಹಾಗೂ ಸಾಹಿತ್ಯಾಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button