ತಾಯಿ ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕಿ; ಪತ್ತೆಗೆ ಪೊಲೀಸರ ಮನವಿ
ಮನೆ ಸ್ವಚ್ಛಗೊಳಿಸುವ ವಿಚಾರಕ್ಕೆ ಬೇಸರಗೊಂಡು ಮನೆ ತೊರೆದ 15 ವರ್ಷದ ಬಾಲಕಿ; ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ.

ಕಲಬುರಗಿ, ಜು.25: ಮನೆ ಸ್ವಚ್ಛಗೊಳಿಸುವಂತೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸರಗೊಂಡು 15 ವರ್ಷದ ಬಾಲಕಿ ಮನೆ ಬಿಟ್ಟು ಹೋಗಿರುವ ಘಟನೆ ನಗರದ ನಾಗನಹಳ್ಳಿ ಕ್ರಾಸ್ ಸಮೀಪದ ಜಮಶೆಟ್ಟಿ ನಗರದಲ್ಲಿ ನಡೆದಿದೆ.
ಶ್ರೀಮತಿ ಗಾಯತ್ರಿ ಅವರ ಪುತ್ರಿ ಭಾಗೀರಥಿ (15) ಕಾಣೆಯಾಗಿರುವ ಬಾಲಕಿಯಾಗಿದ್ದು, ಆಕೆ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆ ಸ್ವಚ್ಛಗೊಳಿಸುವ ವಿಚಾರವಾಗಿ ತಾಯಿ ಬುದ್ಧಿವಾದ ಹೇಳಿದ ನಂತರ ಬೇಸರಗೊಂಡು ತನ್ನ ಬ್ಯಾಗ್ ತೆಗೆದುಕೊಂಡು ಮನೆಯಿಂದ ಹೊರಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ತಾಯಿ ಗಾಯತ್ರಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಾಲಕಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



