ಹಾಸನ, ತುಮಕೂರು, ಮಂಡ್ಯದಲ್ಲಿ ಅಕ್ರಮ ಬೀಜ-ರಸಗೊಬ್ಬರ ದಾಸ್ತಾನು ಪತ್ತೆ; ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಜಪ್ತಿ
ಕೃಷಿ ಇಲಾಖೆಯ ಮಿಂಚಿನ ಕಾರ್ಯಾಚರಣೆ; ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ರಾಜ್ಯದ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಜಪ್ತಿ ಮಾಡಲಾಗಿದೆ.
ಕೃಷಿ ಇಲಾಖೆ ಆಯುಕ್ತ ಡಾ. ಬಿ.ಸಿ. ಸತೀಶ್ ಅವರ ನಿರ್ದೇಶನದಂತೆ ಅಕ್ರಮ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮತ್ತು ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.
ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಕೊಂಡಜ್ಜಿಕೊಪ್ಪಲುವಿನ ಕಾರ್ತಿಕ ಟ್ರೇಡರ್ಸ್‌ನಲ್ಲಿ ಅನುಮತಿ ಇಲ್ಲದೆ ಸಂಗ್ರಹಿಸಲಾಗಿದ್ದ ಸುಮಾರು ₹85 ಸಾವಿರ ಮೌಲ್ಯದ 180 ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಬೀಜಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಸುಮಾರು ₹12 ಸಾವಿರ ಮೌಲ್ಯದ 30 ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಬೀಜ ಹಾಗೂ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಮದಿಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್‌ನಲ್ಲಿ ಸುಮಾರು ₹1.77 ಲಕ್ಷ ಮೌಲ್ಯದ 88 ಚೀಲ ಯೂರಿಯಾ ಮತ್ತು ಪಾಸ್ಫೋ ಜಿಪ್ಸಮ್ ಗ್ರ್ಯಾನ್ಯುಲ್ಸ್ ಜಪ್ತಿ ಮಾಡಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಗೇಶಿ ಹೋಬಳಿಯ ಹಸಿರು ಹೈಟೆಕ್ ಸೀಡ್ಸ್ ಕೇಂದ್ರದಲ್ಲಿ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಸುಮಾರು ₹86 ಸಾವಿರ ಮೌಲ್ಯದ 22 ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ ಮಂಡ್ಯ ತಾಲ್ಲೂಕಿನ ಇಂದುವಾಳದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 300 ಚೀಲ ಎನ್.ಎಫ್.ಎಲ್. ಯೂರಿಯಾವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ದಾಸ್ತಾನು ಅಥವಾ ಮಾರಾಟ ನಡೆಸಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.



